ADVERTISEMENT

ಋತುರಾಜ್‌ ಬ್ಯಾಟಿಂಗ್‌ ಅಬ್ಬರಕ್ಕೆ ನಲುಗಿದ ಶ್ರೀಲಂಕಾ ‘ಎ’

5 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ; ಭಾರತ ‘ಎ’ ತಂಡದ ಶುಭಾರಂಭ

ಶ್ರೀಕಾಂತ ಕಲ್ಲಮ್ಮನವರ
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ಬೆಳಗಾವಿಯ ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ‘ಎ’ ತಂಡದ ಜೊತೆ ನಡೆದ ಏಕ ದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ‘ಎ’ ತಂಡದ ಋತುರಾಜ್‌ ಗಾಯಕವಾಡ್‌ ಶತಕ ಸಿಡಿಸಿದರು
ಬೆಳಗಾವಿಯ ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ‘ಎ’ ತಂಡದ ಜೊತೆ ನಡೆದ ಏಕ ದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ‘ಎ’ ತಂಡದ ಋತುರಾಜ್‌ ಗಾಯಕವಾಡ್‌ ಶತಕ ಸಿಡಿಸಿದರು   

ಬೆಳಗಾವಿ: ಬಿಸಿಲಿನಿ ಝಳಕ್ಕೆ ಕೆಂಡದಂತಾಗಿದ್ದ ನಗರದಲ್ಲಿ ಆಗಷ್ಟೇ ಸುರಿದ ಮಳೆಯು, ಆಹ್ಲಾದಕರ ವಾತಾವರಣ ನಿರ್ಮಿಸಿತ್ತು. ಇದರ ಲಾಭ ಪಡೆದುಕೊಂಡ ಭಾರತ ‘ಎ’ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕವಾಡ್‌ ತಮ್ಮ ಬ್ಯಾಟ್‌ ಅನ್ನು ಲೀಲಾಜಾಲವಾಗಿ ಬೀಸಿದರು. ಆಹ್ಲಾದಕರ ವಾತಾವರಣದ ಜೊತೆ ಪ್ರೇಕ್ಷಕರಿಗೆ ಕ್ರಿಕೆಟ್‌ನ ರಸದೌತಣ ಬಡಿಸಿದರು.

ಇಲ್ಲಿನ ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ’ಎ’ ತಂಡದ ಜೊತೆ ನಡೆದ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಋತುರಾಜ್‌ ಬ್ಯಾಟಿಂಗ್‌ ಅಬ್ಬರಿಸಿತು. ಅವರು ಔಟಾಗದೇ ಸಿಡಿಸಿದ 187 ರನ್‌ಗಳ ಸಹಾಯದಿಂದ ಭಾರತ ‘ಎ’ ತಂಡವು 42 ಓವರ್‌ಗಳಲ್ಲಿ 317 ರನ್‌ ಗಳಿಸಿತು. ಇದರ ಬೆನ್ನಟ್ಟಿದ ಶ್ರೀಲಂಕಾ ‘ಎ’ ತಂಡವು 6 ವಿಕೆಟ್‌ಗಳ ನಷ್ಟಕ್ಕೆ 269 ರನ್ ಗಳಿಸುವಷ್ಟರಲ್ಲಿ ಮುಗ್ಗರಿಸಿತು. 48 ರನ್‌ಗಳ ಅಂತರದಿಂದ ಭಾರತ ‘ಎ’ ತಂಡ ಜಯಗಳಿಸಿತು. ಐದು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಗೆ ಭಾರತ ‘ಎ’ ತಂಡ ಶುಭಾರಂಭ ನೀಡಿತು.

ಓವರ್‌ ಕಡಿತ:ಬೆಳಗಿನ ಜಾವ ಮಳೆ ಸುರಿದಿದ್ದರಿಂದಾಗಿ ಪಂದ್ಯ ಆರಂಭಗೊಳ್ಳಲು ಸುಮಾರು ಒಂದು ಗಂಟೆ ವಿಳಂಬವಾಯಿತು. ಅದಕ್ಕಾಗಿ ಪಂದ್ಯವನ್ನು 42 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್‌ ಗೆದ್ದ ಶ್ರೀಲಂಕಾ ‘ಎ’ ತಂಡವು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು. ಋತುರಾಜ್‌ ಗಾಯಕವಾಡ್‌ ಹಾಗೂ ಶುಭಮನ್‌ ಗಿಲ್‌ ಬ್ಯಾಟಿಂಗ್‌ ಆರಂಭಿಸಿದರು.

ADVERTISEMENT

ಆರಂಭಿಕ ಆಘಾತ:ಆಗಷ್ಟೇ ಬ್ಯಾಟ್‌ ಬೀಸಲು ಆರಂಭಿಸಿದ್ದ ಶುಭಮನ್‌ ಗಿಲ್‌, ಮೂರನೇ ಓವರ್‌ನಲ್ಲಿಯೇ ವಿಕೆಟ್‌ ಕೀಪರ್‌ ನಿರೋಶಾನ್‌ ಡಿಕ್‌ವೆಲ್‌ ಅವರಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಲಹಿರುಕುಮಾರ್‌ ಅವರ ಬೌಲ್‌ಗೆ ಕಟ್‌ ಮಾಡಲು ಹೋಗಿ ವಿಕೆಟ್‌ ಒಪ್ಪಿಸಿದ್ದರು. 6 ಎಸೆತ ಎದುರಿಸಿ, 5 ರನ್‌ ಬಾರಿಸಿದ್ದರು.

ಋತುರಾಜ್‌ ಅವರನ್ನು ಜೊತೆಗೂಡಿದ ಅನ್‌ಮೋಲ್‌ಪ್ರೀತ್‌ ಸಿಂಗ್‌ ರನ್‌ಗಳ ಗತಿ ವೃದ್ಧಿಸಿದರು. 67 ಎಸೆತಗಳಲ್ಲಿ 65 ರನ್‌ಗಳನ್ನು ಕೂಡಿಹಾಕಿದರು. ಇಬ್ಬರೂ ಸೇರಿ ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 2ನೇ ವಿಕೆಟ್‌ ಜೊತೆಯಾಟದಲ್ಲಿ 161 ಎಸೆತಗಳಲ್ಲಿ 163 ರನ್‌ಗಳು ಹರಿದುಬಂದವು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು.

ಅನ್‌ಮೋಲ್‌ ನಂತರ ಕ್ರೀಸ್‌ಗೆ ಬಂದ ನಾಯಕ, ಎಡಗೈ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌, ರನ್‌ ಗಳಿಕೆಯನ್ನು ಪ್ರತಿ ಓವರ್‌ಗೆ 7ರ ಗಡಿ ದಾಟುವಂತೆ ನೋಡಿಕೊಂಡರು. ಕೇವಲ 34 ಎಸೆತಗಳಲ್ಲಿ 45 ರನ್‌ ಗಳಿಸಿದರು. ಋತುರಾಜ್‌ ಜೊತೆಯಾಟದಲ್ಲಿ 65 ಎಸೆತಗಳಲ್ಲಿ 93 ರನ್‌ಗಳನ್ನು ಒಟ್ಟುಗೂಡಿಸಿದರು.

ಪಂದ್ಯದುದ್ದಕ್ಕೂ ಋತುರಾಜ್‌ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. 26 ಬೌಂಡರಿ ಹಾಗೂ 2 ಸಿಕ್ಸ್‌ಗಳನ್ನು ಬಾರಿಸಿದರು. ತಮ್ಮ ಸಹ– ಆಟಗಾರರ ಜೊತೆಗೂಡಿ ಪಂದ್ಯದ ಲಯ ತಪ್ಪದಂತೆ ನೋಡಿಕೊಂಡರು. ಕೇವಲ 40.5 ಓವರ್‌ನಲ್ಲಿ 300 ರನ್‌ಗಳ ಗಡಿಯನ್ನು ದಾಟಿಸಿದ್ದರು. ಇವೆಲ್ಲದರ ಫಲವಾಗಿ ತಂಡವು 317 ರನ್‌ಗಳ ಬೃಹತ್‌ ಮೊತ್ತವನ್ನು ಪೇರೇಪಿಸಿತು.

ಕ್ಯಾಚ್‌ ಕೈ ಚೆಲ್ಲಿದ್ದಕ್ಕೆ ಬೆಲೆ ತೆತ್ತ ಶ್ರೀಲಂಕಾ
ಋತುರಾಜ್‌ ಅವರ ಎರಡು ಕ್ಯಾಚ್‌ ಹಾಗೂ ಇಶಾನ್‌ ಅವರ ಒಂದು ಕ್ಯಾಚ್‌ ಅನ್ನು ಶ್ರೀಲಂಕಾ ಆಟಗಾರರು ಕೈಚೆಲ್ಲಿದರು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು. ರನ್‌ಗಳ ಗುಡ್ಡೆ ಹಾಕಲು ಭಾರತ ಆಟಗಾರರಿಗೆ ಸಹಾಯವಾಯಿತು. ಶ್ರೀಲಂಕಾ ಆಟಗಾರರ ಪೈಕಿ ಶೆಹಾನ್‌ ಜಯಸೂರ್ಯ ಔಟಾಗದೇ 108 (120), ದಾಸೂನ್‌ ಶನಕ 44 (31) ನಡೆಸಿದ ಹೋರಾಟ ವ್ಯರ್ಥವಾಯಿತು. 48 ರನ್‌ಗಳ ಅಂತರದಿಂದ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರ್‌; ಭಾರತ ‘ಎ’: 42 ಓವರ್‌ಗಳಲ್ಲಿ 317/4 (ಋತುರಾಜ್‌ ಗಾಯಕವಾಡ್‌ 187, ಶುಭಮನ್‌ ಗಿಲ್‌ 5, ಅನ್‌ಮೋಲ್‌ ಪ್ರೀತ್‌ ಸಿಂಗ್‌ 65, ಇಶಾನ್‌ ಕಿಶನ್‌ 45, ಶಿವಂ ದುಬೆ 6, ರಿಕಿ ಭುಯಿ 7, ಇತರೆ 2)

ಶ್ರೀಲಂಕಾ ‘ಎ’: 42 ಓವರ್‌ಗಳಲ್ಲಿ 269/6 (ನಿರೋಶಾನ್‌ ಡಿಕ್‌ವೆಲ್‌ 19, ಸಡೇರಾ ಸಮರವಿಕ್ರಮ 0, ಭಾನುಕಾ ರಾಜಪಕ್ಸ 29, ಶೆಹಾನ್‌ ಜಯಸೂರ್ಯ 108, ಆಶಾನ್‌ ಪ್ರಿಯಾಂಜನ್‌ 29, ಕಮಿಂಡು ಮೆಂಡೀಸ್‌ 9, ದಾಸೂನ್‌ ಶನಕ 44, ಇಶಾನ್‌ ಜಯರತ್ನೆ 20, ಇತರೆ 11)

ಪಂದ್ಯ ಪುರುಷೋತ್ತಮ: ಋತುರಾಜ್‌ ಗಾಯಕವಾಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.