ಜಸ್‌ಪ್ರೀತ್ ಬೂಮ್ರಾ
ಪಿಟಿಐ ಚಿತ್ರ
ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಹೊಣೆಯನ್ನು ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಹಿಸಬೇಕು ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ರೋಹಿತ್ ಶರ್ಮಾ ವಿದಾಯದಿಂದ ತೆರವಾಗಿರುವ ಟೆಸ್ಟ್ ತಂಡದ ನಾಯಕತ್ವದ ಕುರಿತು 'ಸ್ಪೋರ್ಟ್ಸ್ ಟುಡೇ' ಜೊತೆ ಮಾತನಾಡಿರುವ ಗವಾಸ್ಕರ್, 'ನನ್ನ ಪ್ರಕಾರ ಜಸ್‌ಪ್ರೀತ್ ಬೂಮ್ರಾ ನಾಯಕರಾಗಬೇಕು. ತಂಡದ ನಂಬರ್ ಒನ್ ಬೌಲರ್ ಆಗಿರುವ ಬೂಮ್ರಾ ಅವರು ಯಾವುದೇ ಸಂದರ್ಭದಲ್ಲಿ ವಿಕೆಟ್‌ಗಳನ್ನು ತೆಗೆದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೇರೆಯವರನ್ನು ನಾಯಕರನ್ನಾಗಿ ನೇಮಿಸಿದರೆ, ವಿಕೆಟ್ ಸಲುವಾಗಿ ಬೂಮ್ರಾ ಅವರಿಂದ ಹೆಚ್ಚುವರಿ ಓವರ್‌ಗಳನ್ನು ಬಯಸುತ್ತಾರೆ. ಅದರ ಬದಲು, ಬೂಮ್ರಾ ಅವರೇ ನಾಯಕರಾದರೆ, ತಾವು ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದಿರುತ್ತಾರೆ. ಅದಕ್ಕೆ ತಕ್ಕಂತೆ ಆಡುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ.
ಬೂಮ್ರಾ ಅವರು ಒತ್ತಡ ಹೆಚ್ಚಾದಂತೆ ಗಾಯದ ಸಮಸ್ಯೆಗೆ ತುತ್ತಾಗುತ್ತಾರೆ. ಹಾಗಾಗಿ, ಅವರ ಬದಲು ಬೇರೊಬ್ಬರಿಗೆ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಮಾತನಾಡಿರುವ ಗವಾಸ್ಕರ್, 'ಕಾರ್ಯಭಾರ ನಿರ್ವಹಣೆ ಕುರಿತು ವದಂತಿಗಳು ಹರಿದಾಡುತ್ತಿವೆ. ಆದರೆ, ಎಷ್ಟು ಓವರ್‌ಗಳನ್ನು ಎಸೆಯಬೇಕು. ಯಾವಾಗ ಬೌಲ್ ಮಾಡಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಎಂಬುದು ಬೂಮ್ರಾಗೆ ಸ್ಪಷ್ಟವಾಗಿ ತಿಳಿದಿದೆ. ಹಾಗಾಗಿ, ಹೊಣೆಯನ್ನು ಆತನಿಗೆ (ಬೂಮ್ರಾಗೆ) ನೀಡುವುದು ಉತ್ತಮ' ಎಂದು ವಾದಿಸಿದ್ದಾರೆ.
'ಹಿಟ್‌ಮ್ಯಾನ್' ವಿದಾಯದ ಕುರಿತು, ರೋಹಿತ್ ಎಂದೂ ಅಂಕಿ–ಸಂಖ್ಯೆಗಳಿಗಾಗಿ ಆಡಲಿಲ್ಲ. ನಿರಾಯಾಸವಾಗಿ ಬ್ಯಾಟ್ ಬೀಸುತ್ತಿದ್ದರು ಎಂದಿದ್ದಾರೆ.
'ರೋಹಿತ್ ಇನ್ನಷ್ಟು ಸಾಧನೆ ಮಾಡಬಹುದಿತ್ತು ಎಂದು ಜನರು ಹೇಳಬಹುದು. ಆದರೆ, ವೈಯಕ್ತಿಕ ಸಾಧನೆಗಳ ಬದಲು, ಖುಷಿಯಿಂದ ಆಡಿದವರು ರೋಹಿತ್' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.