ADVERTISEMENT

ರೊ–ಕೊ ಸ್ಥಾನ ತುಂಬಲು ಕನ್ನಡಿಗರ ಪೈಪೋಟಿ

ಭಾರತ ಟೆಸ್ಟ್ ತಂಡದ ಆಯ್ಕೆಯ ನಿರೀಕ್ಷೆಯಲ್ಲಿ ಕರುಣ್ ನಾಯರ್

​ಪ್ರಜಾವಾಣಿ ವಾರ್ತೆ
Published 14 ಮೇ 2025, 0:30 IST
Last Updated 14 ಮೇ 2025, 0:30 IST
ಕರುಣ್ ನಾಯರ್ ಮತ್ತು ಕೆ.ಎಲ್. ರಾಹುಲ್ 
ಕರುಣ್ ನಾಯರ್ ಮತ್ತು ಕೆ.ಎಲ್. ರಾಹುಲ್    

ಬೆಂಗಳೂರು: ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನಗಳನ್ನು ತುಂಬುವವರು ಯಾರು ಎಂಬ ಚರ್ಚೆ ಈಗ ಜೋರಾಗಿದೆ.

ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲು ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸುವ ಸಿದ್ಧತೆಯಲ್ಲಿದೆ. ಇದೇ ಹೊತ್ತಿನಲ್ಲಿ ಇಬ್ಬರೂ ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ. 

ಆದ್ದರಿಂದ ತಂಡದ  ಆರಂಭಿಕ ಆಟಗಾರ ರೋಹಿತ್ ಮತ್ತು 4ನೇ ಕ್ರಮಾಂಕದ ಬ್ಯಾಟರ್ ವಿರಾಟ್ ಸ್ಥಾನಕ್ಕಾಗಿ ಯುವ ಆಟಗಾರರು ಅವಕಾಶ ಪಡೆಯುವ ಸಾಧ್ಯತೆ ಇದೆ.  ಈ ಪೈಪೋಟಿಯಲ್ಲಿ ಮೂವರು ಕನ್ನಡಿಗರೂ ಇದ್ದಾರೆ. 

ADVERTISEMENT

ಕೆ.ಎಲ್. ರಾಹುಲ್:

ಸದ್ಯ ಭಾರತ ತಂಡದಲ್ಲಿ ಇರುವ ಹೆಚ್ಚು ಅನುಭವಿ ಬ್ಯಾಟರ್‌ಗಳಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಪ್ರಮುಖರು. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ಯಶಸ್ವಿ ಜೈಸ್ವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. 33 ವರ್ಷದ ರಾಹುಲ್ ಅವರು ಕೆಲವು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಿದ್ದಾರೆ. ಕೆಲವು ಟೆಸ್ಟ್‌ಗಳಲ್ಲಿ ರಿಷಭ್ ಪಂತ್ ಗೈರುಹಾಜರಿಯಲ್ಲಿ ವಿಕೆಟ್‌ಕೀಪಿಂಗ್ ಕೂಡ ಮಾಡಿದ್ದಾರೆ. ಯಾವುದೇ ಬ್ಯಾಟಿಂಗ್‌ ಕ್ರಮಾಂಕದಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಅವರಲ್ಲಿದೆ. 

ಕರುಣ್ ನಾಯರ್:

ಕೆಲವು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೂ ಈಗ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವ ಆಸೆ ಚಿಗುರೊಡೆದಿದೆ. ಅವರು ಈಚೆಗೆ ರಣಜಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ರನ್‌ಗಳನ್ನು ಪೇರಿಸಿದ್ದಾರೆ. ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿಯೂ ಮಿಂಚಿದ್ದಾರೆ. ಅವರು ಕೂಡ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟರ್ ಆಗಿದ್ದಾರೆ. 2016ರಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದರು. ಅದರ ನಂತರ ಅವರು ಆಡಿದ್ದು ಕೇವಲ 4 ಟೆಸ್ಟ್‌ಗಳಲ್ಲಿ ಮಾತ್ರ. 2017ರ ನಂತರ ಅವರಿಗೆ ಮತ್ತೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. 33 ವರ್ಷದ ಕರುಣ್ ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಯಿಂದಾಗಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ದೇವದತ್ತ ಪಡಿಕ್ಕಲ್:

ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. 24 ವರ್ಷದ ಪಡಿಕ್ಕಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯಲ್ಲಿ ಆಡಿದ್ದರು. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಉಪಯುಕ್ತ ಬ್ಯಾಟರ್ ಅವರಾಗಿದ್ದಾರೆ. 

ಶುಭಮನ್ ಗಿಲ್:

ಪಂಜಾಬ್ ಆಟಗಾರ ಗಿಲ್ ಅವರು ನಾಯಕನ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸದ್ಯ ಅವರು ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. 25 ವರ್ಷದ ಗಿಲ್ 30 ಪಂದ್ಯಗಳನ್ನು ಆಡಿರುವ ಅನುಭವಿ. 

ಬಿ. ಸಾಯಿಸುದರ್ಶನ್:

ಸ್ಟೈಲೀಷ್ ಎಡಗೈ ಬ್ಯಾಟರ್ ಬಿ. ಸಾಯಿಸುದರ್ಶನ್ ಅವರು ತಮ್ಮ ಚೆಂದದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್‌ ಪರವಾಗಿ ರನ್‌ಗಳ ಹೊಳೆಯನ್ನು ಹರಿಸುತ್ತಿದ್ದಾರೆ. ಅವರ ಸ್ಥಿರ ಪ್ರದರ್ಶನವು ಆಯ್ಕೆಗಾರರ ಗಮನ ಸೆಳೆದರೆ ಅಚ್ಚರಿಯೇನಿಲ್ಲ. ದೇಶಿ ಕ್ರಿಕೆಟ್‌ನಲ್ಲಿಯೂ ಅವರು ಉತ್ತಮವಾಗಿ ಆಡಿದ್ದಾರೆ. ಅವರು ಕೂಡ ಆರಂಭಿಕ ಅಥವಾ ಮೂರನೇ ಕ್ರಮಾಂಕದ ಬ್ಯಾಟಿಂಗ್‌ಗೆ ಸೂಕ್ತವಾಗಿದ್ದಾರೆ. 

ಶ್ರೇಯಸ್ ಅಯ್ಯರ್:

ಮುಂಬೈ ಆಟಗಾರ ಶ್ರೇಯಸ್ ಅಯ್ಯರ್ ಅವರು ಕೂಡ ಟೆಸ್ಟ್ ಬಳಗದ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಅವರು ಕೂಡ 4ನೇ ಕ್ರಮಾಂಕದಲ್ಲಿ ಆಡುವ ಬ್ಯಾಟರ್ ಆಗಿದ್ದಾರೆ.  ಹೋದ ವರ್ಷ ದೇಶಿ ಕ್ರಿಕೆಟ್‌ನಲ್ಲಿ ಆಡುವ ನಿಯಮವನ್ನು ಪಾಲಿಸದ ಕಾರಣಕ್ಕೆ ಶಿಸ್ತು ಕ್ರಮ ಎದುರಿಸಿದ್ದರು. ಅದರ ನಂತರ ಮತ್ತೆ ದೇಶಿ ಕ್ರಿಕೆಟ್‌ನಲ್ಲಿ ಆಡಿ, ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.