ADVERTISEMENT

19 ವರ್ಷದೊಳಗಿನವರ ವಿಶ್ವಕಪ್: ಭಾರತ ಎದುರು 41 ರನ್‌ಗೆ ಆಲೌಟ್ ಆದ ಜಪಾನ್

ಎದರುರಾಳಿ ತಂಡದ ಮೊತ್ತದ ಅರ್ಧದಷ್ಟು ಇತರೆ ರನ್ ಬಿಟ್ಟುಕೊಟ್ಟ ಪ್ರಿಯಂ ಗರ್ಗ್ ಪಡೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 12:01 IST
Last Updated 21 ಜನವರಿ 2020, 12:01 IST
   

ಬ್ಲೂಮ್‌ಫೊಂಟೇನ್‌, ದಕ್ಷಿಣ ಆಫ್ರಿಕಾ: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ತನ್ನಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕ ಮಾಡಿಕೊಂಡ ಭಾರತ, ಎದುರಾಳಿ ಜಪಾನ್‌ ತಂಡವನ್ನು 41 ರನ್‌ಗೆ ಕಟ್ಟಿಹಾಕಿದೆ.

ಇಲ್ಲಿನ ಮಾಂಗೌಂಗ್‌ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಜಪಾನ್‌ಗೆಪ್ರಿಯಂ ಗರ್ಗ್‌ ಪಡೆಯ ಬೌಲರ್‌ಗಳು ಆಘಾತ ನೀಡಿದರು.ಮಧ್ಯಮ ವೇಗಿ ಕಾರ್ತಿಕ್‌ ತ್ಯಾಗಿ ಮತ್ತು ಸ್ಪಿನ್ನರ್‌ ರವಿ ಬಿಷ್ಣೋಯಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ‌‌‘ಕ್ರಿಕೆಟ್‌ ಕೂಸು’ ಜಪಾನ್‌, ರನ್‌ ಗಳಿಸಲು ಪರದಾಡಿತು.

ಶು ನುಗೊಚಿ (7) ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ಮಾರ್ಕಸ್‌ ಥುರ್ಗೆಟ್‌ 18 ಎಸೆತಗಳನ್ನು ಎದುರಿಸಿ ಕೇವಲ 1 ರನ್‌ ಗಳಿಸಿ ಔಟಾದರು. ಬಳಿಕ ಬಂದ ಐವರು ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಹೀಗಾಗಿ 19 ರನ್ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್‌ ಕಳೆದುಕೊಂಡಿದ್ದ ಜಪಾನ್‌ ತಂಡವನ್ನು ಮ್ಯಾಕ್ಸ್‌ ಕ್ಲೆಮೆಂಟ್‌ (5) ಹಾಗೂ ಕೆಂಟೊ ಒಟ ಡೆಬೆಲ್ 30ರ ಗಡಿ ದಾಟಿಸಿದರು.

ADVERTISEMENT

ಈ ತಂಡದ ಪರ ದಾಖಲಾದದ್ದು ಕೇವಲ 2 ಬೌಂಡರಿಗಳು ಮಾತ್ರ. ಆರಂಭಿಕ ನುಗೊಚಿ ಹಾಗೂ ಕ್ಲೆಮೆಂಟ್‌ ತಲಾ ಒಂದೊಂದು ಬೌಂಡರಿ ಗಳಿಸಿದ್ದು ಬಿಟ್ಟರೆ, ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಉಳಿದವರಿಗೆ ಸಾಧ್ಯವಾಗಲಿಲ್ಲ.

ಹೆಚ್ಚು (39) ಎಸೆತಗಳನ್ನು ಎದುರಿಸಿದ ಡೆಬಲ್‌, 7 ರನ್‌ ಗಳಿಸಿ ಔಟಾಗುವುದರೊಂದಿಗೆ 22.5ನೇ ಓವರ್‌ನಲ್ಲಿ ಜಪಾನ್‌ ಇನಿಂಗ್ಸ್‌ಗೆ ತೆರೆ ಬಿದ್ದಿತು.

12 ವೈಡ್‌ಗಳನ್ನು ಎಸೆದ ಭಾರತ ಬೌಲರ್‌ಗಳು ಎದುರಾಳಿ ತಂಡಕ್ಕೆ ಇತರೆ ರೂಪದಲ್ಲಿಒಟ್ಟು 19 ರನ್‌ಗಳನ್ನು ಬಿಟ್ಟುಕೊಟ್ಟರು. ಇನ್ನು ಮೂರುರನ್‌ ಕೊಟ್ಟಿದ್ದರೆ ಅರ್ಧಕ್ಕಿಂತ ಹೆಚ್ಚು ರನ್‌ ಇತರೆ ರೂಪದಲ್ಲೇ ದಾಖಲಾಗುತ್ತಿದ್ದವು.

8 ಓವರ್‌ ಬೌಲಿಂಗ್ ಮಾಡಿದ ರವಿ ಕೇವಲ 5 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. 6 ಓವರ್‌ ಎಸೆದ ತ್ಯಾಗಿ 10 ರನ್‌ ನೀಡಿ 3 ವಿಕೆಟ್‌ ಪಡೆದರು. ಆಕಾಶ್‌ ಸಿಂಗ್‌ ಮತ್ತುಕರ್ನಾಟಕದ ವಿದ್ಯಾಧರ್‌ ಪಾಟೀಲ್‌ ಕ್ರಮವಾಗಿ 2 ಹಾಗೂ 1 ವಿಕೆಟ್‌ ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.