ತ್ರಿಷಾ ಗೊಂಗಡಿ
(ಚಿತ್ರ ಕೃಪೆ: X/@ICC)
ಕ್ವಾಲಾಲಂಪುರ: ಆರಂಭ ಆಟಗಾರ್ತಿ ತ್ರಿಷಾ ಗೋಂಗಡಿ, ಮಹಿಳೆಯರ 19 ವರ್ಷದೊಳಗಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲನೆಯವರೆಂಬ ದಾಖಲೆಗೆ ಪಾತ್ರರಾದರು. ಅವರ ಮಿಂಚಿನ ಶತಕದ ನೆರವಿನಿಂದ ಭಾರತ ತಂಡ ಮಂಗಳವಾರ ನಡೆದ ಸೂಪರ್ ಸಿಕ್ಸ್ ಒಂದನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು 150 ರನ್‌ಗಳಿಂದ ಸುಲಭವಾಗಿ ಸೋಲಿಸಿತು.
ತ್ರಿಶಾ ವೈವಿಧ್ಯಮಯ ಹೊಡೆತಗಳಿದ್ದ 59 ಎಸೆತಗಳ ಇನಿಂಗ್ಸ್‌ನಲ್ಲಿ ಅಜೇಯ 110 ರನ್ ಬಾರಿಸಿದರು. ಇದರಲ್ಲಿ 13 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಒಳಗೊಂಡಿದ್ದವು. ಅವರು ಮೊದಲ ವಿಕೆಟ್‌ಗೆ ವಿಕೆಟ್ ಕೀಪರ್ ಕಮಲಿನಿ (51, 42 ಎಸೆತ) ಅವರೊಂದಿಗೆ 147 ರನ್ ಸೇರಿಸಿದ್ದರು. ಭಾರತ ತನ್ನ ಪಾಲಿನ 20 ಓವರುಗಳಲ್ಲಿ 1 ವಿಕೆಟ್‌ಗೆ 208 ರನ್ ಬಾರಿಸಿತು.
ಉತ್ತರವಾಗಿ ಸ್ಕಾಟ್ಲೆಂಡ್ 14 ಓವರುಗಳಲ್ಲಿ 58 ರನ್‌ಗಳಿಗೆ ಉರುಳಿತು. ಎಡಗೈ ಸ್ಪಿನ್ನರ್‌ಗಳಾದ ಆಯುಷಿ ಶುಕ್ಲಾ 8 ರನ್ನಿಗೆ 4 ವಿಕೆಟ್ ಪಡೆದರೆ, ವೈಷ್ಣವಿ ಶರ್ಮಾ 5 ರನ್ನಿಗೆ 3 ವಿಕೆಟ್ ಗಳಿಸಿದರು. ಬ್ಯಾಟ್‌ನಲ್ಲಿ ಮಿಂಚಿದ ನಂತರ ತ್ರಿಷಾ ಲೆಗ್‌ಬ್ರೇಕ್ ಬೌಲಿಂಗ್‌ನಲ್ಲಿ 6 ರನ್ನಿಗೆ 3 ವಿಕೆಟ್ ಉರುಳಿಸಿದರು. ಆರಂಭ ಆಟಗಾರ್ತಿಯರಾದ ಪಿಪ್ಪಾ ಕೆಲ್ಲಿ ಮತ್ತು ಎಮ್ಮಾ ವಲ್ಸಿಂಗಮ್ ತಲಾ 12 ರನ್ ಗಳಿಸಿದ್ದರು.
ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.
ಸರ್ವಾಕ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ತಂಡಗಳ ನಡುವೆ ನಡೆಯಬೇಕಾಗಿದ್ದ ಎರಡನೇ ಗುಂಪಿನ ಪಂದ್ಯ ಮಳೆಗೆ ಕೊಚ್ಚಿಹೋಯಿತು. ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಖಚಿತಪಡಿಸಿಕೊಂಡಿದೆ. ಒಂದು ಪಾಯಿಂಟ್ ಪಡೆದ ಅಮೆರಿಕ ಈ ಗುಂಪಿನಲ್ಲಿ ಮೂರನೇ ಸ್ಥಾನಕ್ಕೇರಿತು.
ಸ್ಕೋರುಗಳು: ಭಾರತ: 20 ಓವರುಗಳಲ್ಲಿ 1 ವಿಕೆಟ್‌ಗೆ 208 (ಜಿ.ಕಮಲಿನಿ 51, ಗೋಂಗಡಿ ತ್ರಿಷಾ ಔಟಾಗದೇ 110, ಸಾನಿಕಾ ಚಾಲ್ಕೆ ಔಟಾಗದೇ 29): ಸ್ಕಾಟ್ಲೆಂಡ್: 14 ಓವರುಗಳಲ್ಲಿ 58 (ಆಯುಷಿ ಶುಕ್ಲಾ 8ಕ್ಕೆ4, ವೈಷ್ಣವಿ ಶರ್ಮಾ 5ಕ್ಕೆ3, ಗೋಂಗಡಿ ತ್ರಿಷಾ 6ಕ್ಕೆ3). ಪಂದ್ಯದ ಆಟಗಾರ್ತಿ: ಗೋಂಗಡಿ ತ್ರಿಷಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.