ADVERTISEMENT

IND vs AUS: ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2021, 9:21 IST
Last Updated 15 ಜನವರಿ 2021, 9:21 IST
ನೆಟ್ ಬೌಲರ್ ಕಾಣಿಸಿಕೊಂಡ ಎಲ್ಲ ಮೂರು ಮಾದರಿಯಲ್ಲೂ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಟಿ. ನಟರಾಜನ್
ನೆಟ್ ಬೌಲರ್ ಕಾಣಿಸಿಕೊಂಡ ಎಲ್ಲ ಮೂರು ಮಾದರಿಯಲ್ಲೂ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಟಿ. ನಟರಾಜನ್   

ಬ್ರಿಸ್ಬೇನ್‌: ಪ್ರವಾಸಿ ಭಾರತ ವಿರುದ್ಧ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ, ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ (108) ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ.

ನಟರಾಜನ್, ಸುಂದರ್ ಪದಾರ್ಪಣೆ...
ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಡುಗ ಬಳಗದಲ್ಲಿ ಬದಲಾವಣೆ ತರುವುದು ಅನಿವಾರ್ಯವೆನಿಸಿತ್ತು. ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖವಾಗಿಯೂ ನಾಲ್ಕು ಬದಲಾವಣೆಗಳನ್ನು ತರಲಾಗಿತ್ತು. ಗಾಯದ ಸಮಸ್ಯೆಗೆ ಸಿಲುಕಿರುವ ಜಸ್‌ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜ ಅಲಭ್ಯರಾದ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಮಯಂಕ್ ಅಗರವಾಲ್ ಮತ್ತು ತಂಗರಸು ನಟರಾಜನ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು.

ಈ ಪೈಕಿ ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್ ಪದಾರ್ಪಣೆ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಗಮನ ಸೆಳೆದರು.

ADVERTISEMENT

ಅನನುಭವಿ ಬೌಲಿಂಗ್ ಪಡೆ...
ಸರಣಿ ಆರಂಭಕ್ಕೂ ಮೊದಲೇ ಇಶಾಂತ್ ಶರ್ಮಾ ಹಾಗೂ ಭುವನೇಶ್ವರ್ ಕುಮಾರ್ ಸೇವೆಯಿಂದ ವಂಚಿತವಾಗಿರುವ ಟೀಮ್ ಇಂಡಿಯಾಗೆ ಸರಣಿ ಮಧ್ಯೆ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಜಸ್‌ಪ್ರೀತ್ ಬೂಮ್ರಾ ಬೆನ್ನು ಬೆನ್ನುಗೆ ಗಾಯದ ಸಮಸ್ಯೆಗೆ ಸಿಲುಕಿರುವುದು ತುಂಬಲಾರದ ನಷ್ಟವಾಗಿತ್ತು.

ಭಾರತದ ಅನನುಭವಿ ಬೌಲಿಂಗ್ ಪಡೆಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಿದರು. ಅಲ್ಲದೆ ಮೊದಲ ಓವರ್‌ನಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ ವಿಕೆಟ್ ಪಡೆದು ಮಿಂಚಿದರು. ಒಂದು ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ 10 ಎಸೆತಗಳನ್ನಷ್ಟೇ ಎಸೆದಿರುವ ಶಾರ್ದೂಲ್ ಠಾಕೂರ್ಕೂಡಾ ತಮ್ಮ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಪಡೆದು ಮಿಂಚಿದರು.

ಗಾಯದ ಮೇಲೆ ಬರೆ; ಸೈನಿ ಆಡುವುದೇ ಅನುಮಾನ...
ಈ ಮಧ್ಯೆ ಸತತ ಗಾಯದ ಮೇಲೆ ಬರೆ ಎಳೆದಂತೆ ಪಂದ್ಯ ಆರಂಭವಾದ ಬಳಿಕವೂ ನವದೀಪ್ ಸೈನಿ ಗಾಯದ ತೊಂದರೆಗೆ ಸಿಲುಕಿರುವುದು ಭಾರತಕ್ಕೆ ಮಗದೊಂದು ಆಘಾತ ನೀಡುವಂತಾಯಿತು. ಬೌಲಿಂಗ್ ವೇಳೆ ತೊಡೆಸಂದು ನೋವಿಗೊಳಗಾಗಿರುವ ನವದೀಪ್ ಸೈನಿ ಮೈದಾನ ತೊರೆದರು. ಇವರ ಗಾಯವನ್ನು ಬಿಸಿಸಿಐ ವೈದ್ಯಕೀಯ ತಂಡ ಪರಿಶೀಲಿಸುತ್ತಿದ್ದು, ಸ್ಕ್ಯಾನಿಂಗ್‌ಗಾಗಿ ರವಾನಿಸಲಾಗಿದೆ.

ರೋಹಿತ್ ಶರ್ಮಾ ಬೌಲಿಂಗ್...
ಈ ಮಧ್ಯೆ ನವದೀಪ್ ಸೈನಿ ಅವರ ಬೌಲಿಂಗ್ ಅನ್ನು ಉಪನಾಯಕ ರೋಹಿತ್ ಶರ್ಮಾ ಪೂರ್ಣಗೊಳಿಸಿದರು. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಆಫ್ ಸ್ಪಿನ್ ನಡೆಸುತ್ತಿದ್ದ ರೋಹಿತ್ ಶರ್ಮಾ ಮಧ್ಯಮ ಗತಿಯಲ್ಲಿ ಬೌಲಿಂಗ್ ಮಾಡುನ ಮೂಲಕ ಗಮನ ಸೆಳೆದರು.

ಕೈಚೆಲ್ಲಿದ ಕ್ಯಾಚ್..
ರವೀಂದ್ರ ಜಡೇಜ ಅವರಂತಹ ಅತ್ಯುತ್ತಮ ಫೀಲ್ಡರ್‌ಗಳ ಸೇವೆಯನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾ ಅದೇ ಹಳೆಯ ಚಾಳಿ ಮುಂದುವರಿಸಿರುವುದು ಹಿನ್ನೆಡೆಗೆ ಕಾರಣವಾಯಿತು. ಅದರಲ್ಲೂ ಮಾರ್ನಸ್ ಲಾಬುಷೇನ್ ಸುಲಭ ಕ್ಯಾಚ್ ಕೈಚೆಲ್ಲಿದ ನಾಯಕ ಅಜಿಂಕ್ಯ ರಹಾನೆ, ಟೀಕೆಗೆ ಗುರಿಯಾದರು. ಅನನುಭವಿ ಬೌಲರ್‌ಗಳು ಪರಿಣಾಮಕಾರಿ ದಾಳಿ ಸಂಘಟಿಸಿದರೂ ಫೀಲ್ಡರ್‌ಗಳಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು.

ಆಸೀಸ್ ನೆಲದಲ್ಲಿ ಚೊಚ್ಚಲ ವಿಕೆಟ್ ಸಾಧನೆ...
ಭಾರತೀಯ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಟಿ. ನಟರಾಜನ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್, ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಸಾಧನೆ ಮಾಡಿದರು. ಈ ಪೈಕಿ ಸಿರಾಜ್, ನಟರಾಜನ್, ಸೈನಿ ಹಾಗೂ ಸುಂದರ್ ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು.

ಸರಣಿಯೊಂದರಲ್ಲೇ ಐವರು ಪದಾರ್ಪಣೆ...
ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ ಐವರು ಮಂದಿ ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ಟಿ. ನಟರಾಜನ್, ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್ ಇದೇ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಕ್ಯಾಪ್ ಧರಿಸಿದ್ದರು.

60 ವರ್ಷಗಳಲ್ಲಿ ಇದೇ ಮೊದಲು...
60 ವರ್ಷಗಳ ಭಾರತದ ಟೆಸ್ಟ್ ಅಭಿಯಾನದಲ್ಲಿ ಇದೇ ಮೊದಲ ಬಾರಿಯೆಂಬಂತೆ ಸರಣಿಯೊಂದರಲ್ಲಿ 20 ವಿಭಿನ್ನ ಆಟಗಾರರನ್ನು ಕಣಕ್ಕಿಳಿಸಲಾಗಿದೆ.

ಒಟ್ಟು ಟೆಸ್ಟ್ ಅನುಭವ ಬರಿ 4ಪಂದ್ಯ...
ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲಿಂಗ್ ಪಡೆಯ ಒಟ್ಟು ಟೆಸ್ಟ್ ಅನುಭವ ಬರಿ ನಾಲ್ಕು ಟೆಸ್ಟ್ ಪಂದ್ಯಗಳಿಗಷ್ಟೇ ಸೀಮಿತವಾಗಿದೆ.

ಟೀಮ್ ಇಂಡಿಯಾ ಗಾಯದ ಪಟ್ಟಿ ಇಂತಿದೆ:

1. ಇಶಾಂತ್ ಶರ್ಮಾ (ಸರಣಿ ಆರಂಭಕ್ಕೂ ಮೊದಲೇ)
2. ಜಸ್‌ಪ್ರೀತ್ ಬೂಮ್ರಾ (ಸರಣಿ ಆರಂಭಕ್ಕೂ ಮೊದಲೇ)
3. ಮೊಹಮ್ಮದ್ ಶಮಿ (ಮೊದಲ ಟೆಸ್ಟ್)
4. ಉಮೇಶ್ ಯಾದವ್ (ದ್ವಿತೀಯ ಟೆಸ್ಟ್)
5. ಕೆಎಲ್ ರಾಹುಲ್ (ದ್ವಿತೀಯ ಟೆಸ್ಟ್)
6. ಜಸ್‌ಪ್ರೀತ್ ಬೂಮ್ರಾ (ತೃತೀಯ ಟೆಸ್ಟ್)
7. ರವಿಚಂದ್ರನ್ ಅಶ್ವಿನ್ (ತೃತೀಯ ಟೆಸ್ಟ್)
8. ಹನುಮ ವಿಹಾರಿ (ತೃತೀಯ ಟೆಸ್ಟ್)
9. ರವೀಂದ್ರ ಜಡೇಜ (ತೃತೀಯ ಟೆಸ್ಟ್)

ಅನುಪಸ್ಥಿತಿ: ವಿರಾಟ್ ಕೊಹ್ಲಿ (ಪಿತೃತ್ವ ರಜೆ)

ಗಾಯದ ಆತಂಕ:
ನವದೀಪ್ ಸೈನಿ (ಅಂತಿಮ ಟೆಸ್ಟ್)
ರಿಷಭ್ ಪಂತ್ (ಶೇ.100ರಷ್ಟು ಫಿಟ್ ಅಲ್ಲದಿದ್ದರೂ ಅಂತಿಮ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ)

ಬ್ರಾಡ್ಮನ್ ದಾಖಲೆ ಮುರಿದ ಲಾಬುಷೇನ್...
ಗಾಬಾದಲ್ಲಿ ಮೂರು ಇನ್ನಿಂಗ್ಸ್ ವೇಳೆಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಆಸೀಸ್ ಮಾಜಿ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆಯನ್ನೇ ಮಾರ್ನಸ್ ಲಾಬುಷೇನ್ ಮುರಿದಿದ್ದಾರೆ. ಡಾನ್ ಬ್ರಾಡ್ಮನ್ 326 ರನ್ ಗಳಿಸಿದ್ದರೆ ಈ ಶತಕದೊಂದಿಗೆ ಮಾರ್ನಸ್ ಒಟ್ಟು 374 ರನ್ ಪೇರಿಸಿದ್ದಾರೆ. ಅಲ್ಲದೆ ಟೆಸ್ಟ್ ವೃತ್ತಿ ಜೀವನದಲ್ಲಿ ನಾಲ್ಕನೇ ಶತಕ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.