ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಮಳೆ ಸುರಿದಾಗ ಪೆವಿಲಿಯನ್‌ನತ್ತ ಓಡಿದ ಭಾರತದ ಬ್ಯಾಟರ್ ಕೆ.ಎಲ್. ರಾಹುಲ್
–ಪಿಟಿಐ ಚಿತ್ರ
ಬ್ರಿಸ್ಬೇನ್: ಭಾರತ ತಂಡವು ಸೋಮವಾರ ಬೆಳಿಗ್ಗೆ ಮೊದಲ ಇನಿಂಗ್ಸ್ ಆರಂಭಿಸಿದ ನಂತರ ಮಳೆಯಿಂದಾಗಿ ಆರು ಸಲ ಆಟ ಸ್ಥಗಿತವಾಯಿತು. ಸುಮಾರು ಐದೂವರೆ ತಾಸುಗಳಲ್ಲಿ ಕೇವಲ 17 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಆದರೆ ಈ ಅವಧಿಯಲ್ಲಿಯೇ ಭಾರತ ತಂಡವು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತು!
ಸೋಮವಾರ ಬೆಳಿಗ್ಗೆ ಆತಿಥೇಯ ಆಸ್ಟ್ರೇಲಿಯಾ ತಂಡವು 445ಕ್ಕೆ ಆಲೌಟ್ ಆಯಿತು. ಅದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಬಳಗವು 51 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ನಡೆದಿದ್ದು ಒಟ್ಟು 33.1 ಓವರ್‌ಗಳ ಆಟವಷ್ಟೇ. ಉಳಿದಿದ್ದು ಮಳೆಯಾಟ.
ಪಂದ್ಯದ ಮೊದಲ ದಿನವೂ ಮಳೆಯಿಂದಾಗಿ ಆಟ ಸ್ಥಗಿತವಾಗಿತ್ತು. ಎರಡನೇ ದಿನವಾದ ಭಾನುವಾರ ಆತಿಥೇಯ ತಂಡವು 8ಕ್ಕೆ 405 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಅಲೆಕ್ಸ್ ಕ್ಯಾರಿ (70 ರನ್) ಮೂರನೇ ದಿನ ಬೆಳಿಗ್ಗೆ ತಮ್ಮ ಅರ್ಧಶತಕ ಪೂರೈಸಿದರು.
ಗಾಬಾ ಕ್ರೀಡಾಂಗಣದ ಮೇಲೆ ಕಾರ್ಮೋಡಗಳು ಠಳಾಯಿಸುತ್ತಿದ್ದವು. ಇತ್ತ ಆಸ್ಟ್ರೇಲಿಯಾ ಬೌಲರ್‌ಗಳು ಮತ್ತೊಮ್ಮೆ ಭಾರತದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಆದರೆ ಕನ್ನಡಿಗ ಕೆ.ಎಲ್. ರಾಹುಲ್ (ಬ್ಯಾಟಿಂಗ್ 33; 64ಎ, 4X4) ಅವರೊಬ್ಬರೇ ಗಟ್ಟಿಯಾಗಿ ನಿಂತರು. ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಇನ್‌ಸ್ವಿಂಗ್ ಎಸೆತವನ್ನು ಫ್ಲಿಕ್ ಮಾಡಿದ ಜೈಸ್ವಾಲ್ ಲೆಗ್‌ಸೈಡ್‌ನಲ್ಲಿದ್ದ ಏಕೈಕ ಫೀಲ್ಡರ್ ಮಿಚೆಲ್ ಮಾರ್ಷ್‌ಗೆ ಕ್ಯಾಚ್ ಆದರು. ಅಡಿಲೇಡ್ ಪಂದ್ಯದಲ್ಲಿಯೂ ಸ್ಟಾರ್ಕ್ ಅವರ ಇದೇ ತರಹದ ಎಸೆತದಲ್ಲಿ ಯಶಸ್ವಿ ಬೌಲ್ಡ್ ಆಗಿದ್ದರು.
ತಮ್ಮ ಇನ್ನೊಂದು ಓವರ್‌ನಲ್ಲಿ ಸ್ಟಾರ್ಕ್ ಹಾಕಿದ ತುಸು ವೈಡ್ ಆಗಿದ್ದ ಎಸೆತವನ್ನು ಆಡಿದ ಶುಭಮನ್ ಗಿಲ್ ಅವರು ಸೆಕೆಂಡ್ ಗಲೀ ಫೀಲ್ಡರ್ ಮಾರ್ಷ್‌ಗೆ ಕ್ಯಾಚ್ ಕೊಟ್ಟರು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಾಗ ಭಾರತದ ಪಾಳೆಯದಲ್ಲಿ ವಿಶ್ವಾಸದ ಕುಡಿಯೊಡೆದಿತ್ತು. ಆದರೆ ತಾವೆದುರಿಸಿದ 16ನೇ ಎಸೆತದಲ್ಲಿ ಕೊಹ್ಲಿ ಮತ್ತೊಮ್ಮೆ ಆಫ್‌ಸ್ಟಂಪ್ ಹೊರಗೆ ಹೊರಟ್ಟಿದ ಚೆಂಡನ್ನು ಕೆಣಕಿ ಕೈಸುಟ್ಟುಕೊಂಡರು. ವೇಗಿ ಜೋಷ್ ಹ್ಯಾಜಲ್‌ವುಡ್ ಸಂಭ್ರಮಿಸಿದರು. ಇದಾದ ನಂತರ ಮಳೆ ಸುರಿಯಲಾರಂಭಿಸಿತು. ಆ ಒಂದು ಎಸೆತವನ್ನು ತಡವದೇ ಇದ್ದಿದ್ದರೆ ಮಳೆ ನಂತರವೂ ಕೊಹ್ಲಿ ಆಡಬಹುದಿತ್ತು!
ರಾಹುಲ್ ಜೊತೆಗೂಡಿದ ರಿಷಭ್ ಪಂತ್ ಸ್ವಲ್ಪ ಹೊತ್ತು ಪ್ರತಿರೋಧವೊಡ್ಡಿದರು. ಆಗಾಗ ಮಳೆಯಿಂದಾಗಿ ಆಟ ಸ್ಥಗಿತವಾಯಿತು. ಆದರೆ ಪಂತ್ (9; 12ಎ) ಅವರು ಪ್ಯಾಟ್ ಕಮಿನ್ಸ್ ಎಸೆತವನ್ನು ಆಡುವ ಭರದಲ್ಲಿ ಚೆಂಡು ಬ್ಯಾಟ್ ಅಂಚು ಸವರಿ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಕೈಗವಸು ಸೇರಿತು. ಪಂತ್ ಕ್ರೀಸ್‌ನಲ್ಲಿದ್ದಷ್ಟು ಹೊತ್ತು ತಮ್ಮ ನಿರ್ಭೀತ ಆಟವಾಡಿದರು. ಆತಿಥೇಯ ವೇಗಿಗಳನ್ನು ಆತ್ಮವಿಶ್ವಾಸಭರಿತರಾಗಿ ಎದುರಿಸಿದರು. ಕೆಲವು ಎಸೆತಗಳನ್ನು ಬಿಟ್ಟರು, ಕೆಲವನ್ನು ರಕ್ಷಣಾತ್ಮಕವಾಗಿ ಆಡಿದರು.
ಆಸ್ಟ್ರೇಲಿಯಾ ಮೂವರು ವೇಗಿಗಳು ನಾಲ್ಕು ವಿಕೆಟ್‌ಗಳನ್ನು ಹಂಚಿಕೊಂಡರು. ತಮಗೆ ಸಿಕ್ಕ ಓವರ್‌ಗಳನ್ನು ಶಿಸ್ತಿನಿಂದ ಬೌಲಿಂಗ್ ಮಾಡಿ ಬ್ಯಾಟರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು. 6.4 ಅಡಿ ಮತ್ತು 6.6 ಅಡಿ ಎತ್ತರಕಯದ ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ಬಳಸಿಕೊಂಡರು. ಹೈ ರಿಲೀಸ್ ಪಾಯಿಂಟ್ ನಿಂದಾಗಿ ಎಸೆತಗಳ ಪುಟಿತ ಹೆಚ್ಚಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ಬೌಲರ್‌ಗಳ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ಬೂಮ್ರಾ (76ಕ್ಕೆ6) ಮಾತ್ರ ತಮ್ಮ ಸಾಮರ್ಥ್ಯ ಮೀರಿ ಎದುರಾಳಿಗಳಿಗೆ ಸವಾಲೊಡ್ಡಿದರು.
ಕ್ರೀಸ್‌ನಲ್ಲಿರುವ ರಾಹುಲ್ ಮತ್ತು ನಾಯಕ ರೋಹಿತ್ (ಖಾತೆ ತೆರೆದಿಲ್ಲ) ಅವರ ಮೇಲೆ ನಿರೀಕ್ಷೆಯ ಭಾರವಿದೆ. ಮಂಗಳವಾರವೂ ರಭಸದ ಮಳೆ ಸುರಿಯುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.