ADVERTISEMENT

AUS vs IND Test: ಆಸಿಸ್ ಎದುರು ಭಾರತಕ್ಕೆ ದಾಖಲೆ ಜಯ; ಪಂದ್ಯ ಶ್ರೇಷ್ಠ ಬೂಮ್ರಾ

ಮಧು ಜವಳಿ
Published 25 ನವೆಂಬರ್ 2024, 8:56 IST
Last Updated 25 ನವೆಂಬರ್ 2024, 8:56 IST
<div class="paragraphs"><p>ಜಯದ ಸಂಭ್ರಮದಲ್ಲಿ ಭಾರತ ತಂಡ</p></div>

ಜಯದ ಸಂಭ್ರಮದಲ್ಲಿ ಭಾರತ ತಂಡ

   

ಚಿತ್ರಕೃಪೆ: X / @BCCI

ಪರ್ತ್‌: ಮೂರು ವಾರಗಳ ಹಿಂದೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಭಾರತ ಯಾರೂ ನಿರೀಕ್ಷಿಸದಂತೆ 3–0 ಮುಖಭಂಗ ಅನುಭವಿಸಿತ್ತು. ಶ್ರೀಲಂಕಾ ಎದುರು ಸರಣಿ ಸೋತಿದ್ದ ನ್ಯೂಜಿಲೆಂಡ್ ಎದುರಿನ ಸೋಲು ಭಾರತಕ್ಕೆ ಅವಮಾನಕಾರಿ ರೀತಿಯಲ್ಲಿತ್ತು. ಆದರೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸೋಮವಾರ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಯಾರೂ ಊಹಿಸದ ರೀತಿ ದೊಡ್ಡ ಅಂತರದ ಗೆಲುವನ್ನು ಸಾಧಿಸಿ ಬೀಗಿತು.

ADVERTISEMENT

ಮೊದಲ ಟೆಸ್ಟ್‌ನಲ್ಲಿ ಗೆಲುವಿಗೆ 534 ರನ್‌ಗಳ ಭಾರಿ ಗುರಿಯನ್ನು ಎದುರಿಸಿದ್ದ ಆತಿಥೇಯರಿಗೆ ಮೂರನೇ ದಿನದಾಟದ ಕೊನೆಗೇ (3 ವಿಕೆಟ್‌ಗೆ 12) ಸೋಲು ಖಚಿತವಾಗಿತ್ತು. ನಾಲ್ಕನೇ ದಿನ, ಸ್ಥಳೀಯ ಕಾಲಮಾನ ಮಧ್ಯಾಹ್ನ 3.47ಕ್ಕೆ ಭಾರತ ಔಪಚಾರವನ್ನು ಪೂರ್ಣಗೊಳಿಸಿತು. ಆಸ್ಟ್ರೇಲಿಯಾ 238 ರನ್‌ಗಳಿಗೆ ಆಲೌಟ್‌ ಆಯಿತು. ಬೂಮ್ರಾ ನೇತೃತ್ವದ ತಂಡ 295 ರನ್‌ಗಳ ಭರ್ಜರಿ ಜಯ ಸಾಧಿಸಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಪುನರುತ್ಥಾನದ ಹಾದಿಯಲ್ಲಿ ಭಾರತ ದಿಟ್ಟ ಹೆಜ್ಜೆಯಿಟ್ಟಿತು.

ಆಪ್ಟಸ್‌ ಕ್ರೀಡಾಂಗಣದಲ್ಲಿ ತಂಪಾದ ಗಾಳಿ ಬೀಸುತ್ತಿದ್ದಂತೆ ಭಾರತದ ಪಾಳೆಯದಲ್ಲೂ ಸಂಭ್ರಮ ಮನೆ ಮಾಡಿತು. ರನ್‌ ಆಧಾರದಲ್ಲಿ ಇದು ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಅತಿ ದೊಡ್ಡ ಗೆಲುವು. ಪದಾರ್ಪಣೆ ಪಂದ್ಯ ಆಡಿದ ಹರ್ಷಿತ್‌ ರಾಣಾ, ಅಲೆಕ್ಸ್‌ ಕ್ಯಾರಿ ಅವರನ್ನು ಬೌಲ್ಡ್‌ ಮಾಡುತ್ತಿದ್ದಂತೆ, ಹಂಗಾಮಿ ನಾಯಕ ಬೂಮ್ರಾ ಸ್ಮರಣಿಕೆಯಾಗಿ ಸ್ಟಂಪ್ ಕೀಳಲು ಓಡಿದರು. ಪರಸ್ಪರ ಆಲಿಂಗನ, ಹೈ–ಫೈವ್ಸ್‌ ನಡೆದವು. ಅಷ್ಟರಲ್ಲಾಗಲೇ ಪರ್ತ್‌ ಕ್ರೀಡಾಂಗಣ ಬಹುತೇಕ ಖಾಲಿಯಾಗಿತ್ತು.

ಇದು ಈ ಕ್ರೀಡಾಂಗಣದಲ್ಲಿ ಆಡಿದ ಐದು ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾಕ್ಕೆ ಮೊದಲ ಸೋಲು.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಪಾಯಿಂಟ್‌ ಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿದರೂ, ಭಾರತ ತಂಡಕ್ಕೆ ಸಾಗಲು ಇನ್ನೂ ದೊಡ್ಡ ಹಾದಿಯಿದೆ. ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸದೇ ಫೈನಲ್ ತಲುಪಲು ಭಾರತ ಇನ್ನೂ ಮೂರು ಟೆಸ್ಟ್‌ ಗೆಲ್ಲಬೇಕಾಗಿದೆ. ಭಾರತ ಆ ದಿಸೆಯಲ್ಲಿ ಉತ್ತಮ ಆರಂಭವನ್ನಂತೂ ಮಾಡಿದೆ.

‌ನಾಲ್ಕನೇ ದಿನ ಆಸ್ಟ್ರೇಲಿಯಾದ ಪ್ರತಿರೋಧ ಎಷ್ಟು ಹೊತ್ತು ಮುಂದುವರಿಯಬಹುದೆಂಬ ಕುತೂಹಲ ಅಷ್ಟೇ ಉಳಿದಿತ್ತು. ಮೊಹಮ್ಮದ್ ಸಿರಾಜ್ (51ಕ್ಕೆ3), ದಿನದ ಎರಡನೇ ಓವರಿನಲ್ಲೇ ಆರಂಭ ಆಟಗಾರ ಉಸ್ಮಾನ್ ಖ್ವಾಜಾ ಅವ ರನ್ನು ಶಾರ್ಟ್‌ಪಿಚ್‌ ಎಸೆತದಲ್ಲಿ ಔಟ್‌ ಮಾಡಿ ದರು. ಆತಿಥೇಯರು ಕೊಂಚ ಪ್ರತಿರೋಧ ತೋರಿದ ಬಳಿಕ ಅವರು ಸ್ವೀವ್ ಸ್ಮಿತ್ ವಿಕೆಟ್‌ ಕೂಡ ಪಡೆದರು. ಪಂದ್ಯ ಬೇಗನೇ ಮುಗಿಯುವ ಹಾಗೆ ಕಂಡಿತು.

ಆದರೆ ಭಾರತವನ್ನು ಈ ಹಿಂದೆ ಸಾಕಷ್ಟು ಸಲ ಕಾಡಿರುವ ಟ್ರಾವಿಸ್ ಹೆಡ್‌ (89, 101ಎ) ಮತ್ತೊಮ್ಮೆ ಆಕರ್ಷಕ ಆಟವಾಡಿದರು. ಅವರಿಗೆ ಮಿಚೆಲ್ ಮಾರ್ಷ್ (47) ಬೆಂಬಲವಾಗಿ ನಿಂತರು. ಆದರೆ ಅವರು ಗೆಲುವನ್ನು ವಿಳಂಬಗೊಳಿಸಿದರಷ್ಟೇ. ಆರನೇ ವಿಕೆಟ್‌ಗೆ 82 ರನ್‌ಗಳು ಬಂದವು. ಈ ಜೊತೆಯಾಟವನ್ನು ಮುರಿಯಲು ಬೂಮ್ರಾ ಅವರೇ ಬರಬೇಕಾಯಿತು. ಹೆಡ್‌ ಅವರ ಆಕರ್ಷಕ ಆಟಕ್ಕೆ ಭಾರತದ ನಾಯಕ ತೆರೆಯೆಳೆದರು. ನಂತರ ಗೆಲುವಿಗೆ ಕ್ಷಣಗಣನೆ ಉಳಿದಿತ್ತು.

ಅಗತ್ಯವಿದ್ದಾಗಲ್ಲೆಲ್ಲಾ ವಿವಿಧ ಪಾತ್ರ ನಿರ್ವಹಿಸಿದ್ದ ಕೆ.ಎಲ್‌.ರಾಹುಲ್ ಇಲ್ಲಿ ಲಯಕ್ಕೆ ಮರಳಿದರು. ಜೈಸ್ವಾಲ್ ಅವರದ್ದು ಒತ್ತಡದ ಸಂದರ್ಭದಲ್ಲಿ ದಾಖಲಾದ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದು. ವಿರಾಟ್ ಕೊಹ್ಲಿ ಅವರ 30ನೇ ಟೆಸ್ಟ್‌ ಶತಕ ತಂಡದ ನೈತಿಕ ಸ್ಥೈರ್ಯವನ್ನು ವೃದ್ಧಿಸಿತು. ಸಿರಾಜ್ ಅವರು ಎಂದಿನ ಲಯಕ್ಕೆ ಮರಳುವ ರೀತಿ ಬೌಲಿಂಗ್ ಮಾಡಿದರು. ಪದಾರ್ಪಣೆ ಪಂದ್ಯದಲ್ಲಿ ಹರ್ಷಿತ್‌ ರಾಣಾ ನಿರಾಸೆ ಮೂಡಿಸಲಿಲ್ಲ. ಆದರೆ ಇವರೆಲ್ಲರ ನಡುವೆಯೂ ಬೂಮ್ರಾ ಪ್ರಭಾವ ಮಸುಕಾಗಲಿಲ್ಲ. ಕರಾರುವಾಕ್ ಬೌಲಿಂಗ್ ಜೊತೆಗೆ ನಾಯಕತ್ವದಲ್ಲೂ ಅವರ ತಂತ್ರಗಳು ಕಡಿಮೆಯಿರಲಿಲ್ಲ. ಅವರು ಪಂದ್ಯದ ಆಟಗಾರ ಗೌರವಕ್ಕೆ ಅರ್ಹರಾಗಿದ್ದರು.

ಅಗ್ರಸ್ಥಾನಕ್ಕೆ ಭಾರತ: ಈ ಗೆಲುವಿನೊಂದಿಗೆ ಭಾರತ ತಂಡವು, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.