ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಸ್ಮೃತಿ ಮಂದಾನ ಅವರು ಶತಕ ಗಳಿಸಿ ಸಂಭ್ರಮಿಸಿದರು
ಪಿಟಿಐ ಚಿತ್ರ
ನವದೆಹಲಿ: ಸ್ಮೃತಿ ಮಂದಾನ ಅವರು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹಾಕಿದ ಬುನಾದಿಯ ಮೇಲೆ ‘ಐತಿಹಾಸಿಕ’ ಗೆಲುವಿನ ಸೌಧ ಕಟ್ಟುವ ದೀಪ್ತಿ ಶರ್ಮಾ ಅವರ ದಿಟ್ಟ ಪ್ರಯತ್ನ ಕೈಗೂಡಲಿಲ್ಲ.
ಒಟ್ಟು 781 ರನ್‌ಗಳ ಪ್ರವಾಹದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ಎದುರು 43 ರನ್‌ಗಳಿಂದ ಗೆದ್ದಿತು. ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು. ಇದರೊಂದಿಗೆ ಭಾರತವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಎದುರು ಏಕದಿನ ಕ್ರಿಕೆಟ್ ಸರಣಿ ಗೆದ್ದು ದಾಖಲೆ ಬರೆಯುವ ಕನಸು ಕಮರಿತು. ಬೆತ್ ಮೂನಿ (138; 75ಎ, 4X23, 6X1)) ಅವರ ಮಿಂಚಿನ ಶತಕದ ಬಲದಿಂದ ಆಸ್ಟ್ರೇಲಿಯಾ ಗಳಿಸಿದ್ದ 412 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ತಂಡವು ವಿಚಲಿತರಾಗದಂತೆ ಆಡಿದ್ದು ಅಭಿಮಾನಿಗಳ ಮನಗೆದ್ದಿತು.
ಆರಂಭಿಕ ಬ್ಯಾಟರ್ ಮಂದಾನ (125; 63ಎ, 4X17, 6X5) ಅವರ ಬೀಸಾಟ ರಂಗೇರಿತು. ಅವರು ಕೇವಲ 50 ಎಸೆತಗಳಲ್ಲಿ ಶತಕದ ಗಡಿ ದಾಟುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಆದರು. ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (52; 35ಎ, 4X8) ಅವರಿಬ್ಬರೂ 109 ರನ್ ಸೇರಿಸಿದರು. ಇದರಿಂದಾಗಿ ಕೇವಲ 20 ಓವರ್‌ಗಳಲ್ಲಿ ತಂಡದ ಮೊತ್ತವು 200ರ ಗಡಿ ದಾಟಿತ್ತು. ಇದೇ ವೇಗದಲ್ಲಿ ಆಡಿದ್ದರೆ ಗೆಲುವು ಸಾಧಿಸುವುದು ಕಷ್ಟವೇನಾಗಿರಲಿಲ್ಲ. ಆದರೆ, ವೇಗಿ ಕಿಮ್ ಗಾರ್ಥ್ ಅವರು ಕೌರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ, ಜೊತೆಯಾಟ ಮುರಿದರು.
ನಂತರದ ಓವರ್‌ನಲ್ಲಿ ಗ್ರೇಸ್ ಹ್ಯಾರಿಸ್ ಎಸೆತವನ್ನು ಬೌಂಡರಿ ದಾಟಿಸುವ ಪ್ರಯತ್ನದಲ್ಲಿ ಮಂದಾನ ಅವರು ಆ್ಯಷ್ಲೆ ಗಾರ್ಡನರ್‌ಗೆ ಕ್ಯಾಚಿತ್ತರು. ರಿಚಾ ಘೋಷ್ ಕೇವಲ 6 ರನ್ ಗಳಿಸಿ ರನೌಟ್ ಆದರು.
ಆದರೆ ಆಲ್‌ರೌಂಡರ್ ದೀಪ್ತಿ (72; 58ಎ, 4X5, 6X2) ಅವರು ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. 124.14ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಸ್ನೇಹರಾಣಾ (35; 41ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ದೀಪ್ತಿಗೆ ಹೆಚ್ಚಿನ ಬೆಂಬಲ ಲಭಿಸಲಿಲ್ಲ.
ಮೂನಿ ಮಿಂಚು: ಭಾರತ ತಂಡದ ಬೌಲರ್‌ಗಳನ್ನು ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದಂಡಿಸಿದರು. ಅದರಲ್ಲೂ ಬೆತ್ ಮೂನಿ ಅವರು ಬೌಂಡರಿಗಳ ಚಿತ್ತಾರ ಬಿಡಿಸಿದರು. ಕೇವಲ 56 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು.
ಆರಂಭಿಕ ಬ್ಯಾಟರ್ ಜಾರ್ಜಿಯಾ ವೊಲ್ (81; 68ಎ) ಅವರು 14 ಬೌಂಡರಿ ಬಾರಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ನಾಯಕಿ ಲಿಸಾ ಹೀಲಿ (30; 18ಎ) ಮಿಂಚಿನ ಆರಂಭ ನೀಡಿದರು. ಎಲಿಸ್ ಪೆರಿ (68; 72ಎ) ಅವರು ಕೂಡ ಅರ್ಧಶತಕ ಗಳಿಸಿದರು.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: 47.5 ಓವರ್‌ಗಳಲ್ಲಿ 412 (ಅಲಿಸಾ ಹೀಲಿ 30, ಜಾರ್ಜಿಯಾ ವೊಲ್ 81, ಎಲಿಸ್ ಪೆರಿ 68, ಬೆತ್ ಮೂನಿ 138, ಆ್ಯಷ್ಲೆ ಗಾರ್ಡನರ್ 39, ಜಾರ್ಜಿಯಾ ವೆರ್ಹಾಮ್ 16, ರೇಣುಕಾ ಸಿಂಗ್ 79ಕ್ಕೆ2, ಅರುಂಧತಿ ರೆಡ್ಡಿ 86ಕ್ಕೆ3, ದೀಪ್ತಿ ಶರ್ಮಾ 75ಕ್ಕೆ2)
ಭಾರತ: 47 ಓವರ್‌ಗಳಲ್ಲಿ 369 (ಸ್ಮೃತಿ ಮಂದಾನ 125, ಹರ್ಮನ್‌ಪ್ರೀತ್ ಕೌರ್ 52, ದೀಪ್ತಿ ಶರ್ಮಾ 72, ಸ್ನೇಹ ರಾಣಾ 35, ಮೇಗನ್ ಶುಟ್ 53ಕ್ಕೆ2, ಕಿಮ್ ಗಾರ್ಥ್ 69ಕ್ಕೆ3)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 43 ರನ್‌ಗಳ ಜಯ ಮತ್ತು ಸರಣಿಯಲ್ಲಿ 2–1ರ ವಿಜಯ.
ಪಂದ್ಯದ ಆಟಗಾರ್ತಿ: ಬೆತ್ ಮೂನಿ
ಸರಣಿ ಆಟಗಾರ್ತಿ: ಸ್ಮೃತಿ ಮಂದಾನ
ಆಸ್ಟ್ರೇಲಿಯಾದ ಬೆತ್ ಮೂನಿ ಅವರ ಬ್ಯಾಟಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.