ADVERTISEMENT

ಇಂದೋರ್ ಟೆಸ್ಟ್: ಇಲ್ಲಿ ಗೆದ್ದಾಯಿತು, ಈಗ ಪಿಂಕ್‌ ಟೆಸ್ಟ್‌ನತ್ತ ಚಿತ್ತ

ಭಾರತಕ್ಕೆ ಇನಿಂಗ್ಸ್ ಮತ್ತು 130 ರನ್‌ಗಳ ಜಯ; ಶಮಿಗೆ ನಾಲ್ಕು ವಿಕೆಟ್; ಮುಷ್ಫಿಕುರ್ ಹೋರಾಟದ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 20:00 IST
Last Updated 16 ನವೆಂಬರ್ 2019, 20:00 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಇಂದೋರ್: ಮುಂದಿನ ವಾರಕೋಲ್ಕತ್ತದಲ್ಲಿ ನಡೆಯಲಿರುವ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ಸಿದ್ಧರಾಗಲು ಭಾರತ ಮತ್ತು ಬಾಂಗ್ಲಾದೇಶ ತಂಡಗಳಿಗೆ ಎರಡು ದಿನಗಳ ಹೆಚ್ಚು ಸಮಯ ಲಭಿಸಿತು!

ಹೋಳ್ಕರ್ ಮೈದಾನದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಮಧ್ಯಾಹ್ನವೇ ಬಾಂಗ್ಲಾ ತಂಡವನ್ನು ಇನಿಂಗ್ಸ್‌ ಮತ್ತು 130 ರನ್‌ಗಳಿಂದ ಮಣಿಸಿದ ಭಾರತ, ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. ಅದರೊಂದಿಗೆ ಕೋಲ್ಕತ್ತ ಟೆಸ್ಟ್‌ಗೆ ಸಿದ್ಧತೆ ಆರಂಭಿಸಿತು.

ಇಲ್ಲಿ ಪಂದ್ಯ ಮುಗಿದ ಕೂಡಲೇ ಬಿಸಿಸಿಐ ಡಾಟ್‌ ಟಿ.ವಿಯೊಂದಿಗೆ ಮಾತುಕತೆ ನಡೆಸಲು ಆತಿಥೇಯ ತಂಡದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಅವರು ಪಿಂಕ್ ಬಾಲ್ ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು. ಅದರ ಬಗ್ಗೆಯೇ ಮಾತನಾಡಿದರು.

ADVERTISEMENT

ಇದಕ್ಕೂ ಮುನ್ನ ಮೊಹಮ್ಮದ್ ಶಮಿ (31ಕ್ಕೆ4) ಅವರಿಗೆ ತಕ್ಕ ಜೊತೆ ನೀಡಿದ್ದ ಆಫ್‌ಸ್ಪಿನ್ನರ್ ಅಶ್ವಿನ್ (42ಕ್ಕೆ3) ಬಾಂಗ್ಲಾ ತಂಡದ ಎರಡನೇ ಇನಿಂಗ್ಸ್‌ಗೆ ಅಂತ್ಯ ಹಾಡಿದ್ದರು.

ಭಾರತವು ಮೊದಲ ಇನಿಂಗ್ಸ್‌ನಲ್ಲಿ ಮಯಂಕ್ ಅಗರವಾಲ್ ಅವರ ದ್ವಿಶತಕದ ಬುನಾದಿಯ ಮೇಲೆ 6 ವಿಕೆಟ್‌ಗಳಿಗೆ 493 ರನ್‌ ಗಳಿಸಿತ್ತು. ವಿರಾಟ್ ಬಳಗದ 343 ರನ್‌ಗಳ ಮುನ್ನಡೆಗೆ ಉತ್ತರವಾಗಿ ಬಾಂಗ್ಲಾ 69.2 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್‌ನಲ್ಲಿ 150 ರನ್‌ ಗಳಿಸಿದ್ದ ‍ಪ್ರವಾಸಿ ತಂಡವು ಎರಡನೇಯದರಲ್ಲಿ 63 ಹೆಚ್ಚು ರನ್‌ಗಳನ್ನು ಹೊಡೆದು ತುಸು ಹೋರಾಟದ ಆಟ ಪ್ರದರ್ಶಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ ಮುಷ್ಫಿಕುರ್ ರಹೀಂ (64; 150ಎಸೆತ, 7ಬೌಂಡರಿ) ಮಾತ್ರ 17ನೇ ಓವರ್‌ನಲ್ಲಿ ತಮಗೆ ಲಭಿಸಿದ ಜೀವದಾನದ ಲಾಭ ಪಡೆದುಕೊಂಡರು. ಶಮಿ ಎಸೆತವನ್ನು ರಹೀಮ್ ಕಟ್ ಮಾಡಿದ್ದಾಗ ಬ್ಯಾಟ್ ಅಂಚು ಸವರಿದ್ದ ಚೆಂಡು ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾರತ್ತ ಸಾಗಿತ್ತು. ಆದರೆ ಸುಲಭ ಕ್ಯಾಚ್‌ ಅನ್ನು ಶರ್ಮಾ ನೆಲಕ್ಕೆ ಹಾಕಿದರು. ಇದರಿಂದಾಗಿ ಭಾರತದ ಗೆಲುವು ತುಸು ವಿಳಂಬವಾಯಿತು.

ರಹೀಂ ತಮ್ಮ ಅರ್ಧಶತಕ ದಾಖಲಿಸಿದರು. ಲಿಟನ್ ದಾಸ್ (35;39ಎ,6ಬೌಂ) ಜೊತೆಗೆ ಆರನೇ ವಿಕೆಟ್‌ಗೆ 63 ರನ್‌ ಸೇರಿಸಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಮೆಹದಿ ಹಸನ್ (38 ರನ್) ಅವರೊಂದಿಗೆ 95 ರನ್‌ ಸೇರಿಸಿದ ರಹೀಂ, 68ನೇ ಓವರ್‌ ನಲ್ಲಿ ಅಶ್ವಿನ್ ಎಸೆತದಲ್ಲಿ ಔಟಾದರು.

ಉಳಿದಂತೆ; ಇನಿಂಗ್ಸ್‌ನಲ್ಲಿ ಶಮಿಯ ಸ್ವಿಂಗ್ ದರ್ಬಾರು ನಡೆಯಿತು. ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಮೊಮಿನುಲ್ ಹಕ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಶಮಿ, ಮೊಹಮ್ಮದ್ ಮಿಥುನ್, ಮಹಮುದುಲ್ಲಾ ಮತ್ತು ತೈಜುಲ್ ಇಸ್ಲಾಂ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ ಶಮಿ ಮೂರು ವಿಕೆಟ್ ಗಳಿಸಿದ್ದರು. ಉಮೇಶ್ ಯಾದವ್ ಎರಡು ವಿಕೆಟ್ ಗಳಿಸಿದರು.

ಸಿಕ್ಸರ್ ಅಭ್ಯಾಸ ಮಾಡಲ್ಲ: ಮಯಂಕ್
‘ನಾನು ಸಿಕ್ಸರ್‌ಗಳನ್ನು ಹೊಡೆಯುವುದನ್ನು ಅಭ್ಯಾಸ ಮಾಡುತ್ತೇನೆ. ಆದರೆ ಟೆಸ್ಟ್‌ ಪಂದ್ಯಗಳ ತಾಲೀಮಿನಲ್ಲಿ ಸಿಕ್ಸರ್‌ ಅಭ್ಯಾಸ ಮಾಡುವುದಿಲ್ಲ’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಹೇಳಿದರು.

ಪಂದ್ಯಶ್ರೇಷ್ಠ ಗೌರವ ಗಳಿಸಿದ ಅವರು ಬಿಸಿಸಿಐ.ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಅವರು ಎಂಟು ಸಿಕ್ಸರ್‌ಗಳನ್ನು ಹೊಡೆದಿದ್ದರು.

‘ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಬಹಳ ವರ್ಷಗಳ ಕನಸು. ಅದು ಈಗ ನನಸಾಗಿದೆ. ಎಷ್ಟು ಸಾಧ್ಯವೋ ಅಷ್ಟು ಸುದೀರ್ಘ ಅವಧಿಯವರೆಗೆ ಇಲ್ಲಿ ಆಡುತ್ತೇನೆ. ನಗು ಹೀಗೆ ಮುಂದುವರೆಯಲಿದೆ’ ಎಂದು ಹೇಳಿದರು.

ಧೋನಿ ದಾಖಲೆ ಮುರಿದ ಕೊಹ್ಲಿ
ಬಾಂಗ್ಲಾ ಎದುರಿನ ಪಂದ್ಯ ಗೆಲ್ಲುವುದರೊಂದಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ಬರೆದರು. ಅವರ ನಾಯಕತ್ವದಲ್ಲಿ ಭಾರತ ತಂಡವು ಇನಿಂಗ್ಸ್‌ ಜಯ ಸಾಧಿಸಿದ ಹತ್ತನೇ ಪಂದ್ಯ ಇದು. 52 ಟೆಸ್ಟ್‌ಗಳಲ್ಲಿ ಅವರು ಈ ಸಾಧನೆ ಮಾಡಿದರು. ಮಹೇಂದ್ರಸಿಂಗ್ ಧೋನಿ ನಾಯಕರಾಗಿದ್ದಾಗ ತಂಡವು 60 ಟೆಸ್ಟ್‌ಗಳಲ್ಲಿ 9 ಬಾರಿ ಇನಿಂಗ್ಸ್‌ ಜಯ ಸಾಧಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ವಿಶ್ವಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿ್ (109 ಟೆಸ್ಟ್, 22 ಇನಿಂಗ್ಸ್‌ ಜಯ) ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.