ADVERTISEMENT

ಕನ್ನಡಿಗ ಅಗರವಾಲ್ ದ್ವಿಶತಕದ ಅಬ್ಬರಕ್ಕೆ ಬೆದರಿದ ಬಾಂಗ್ಲಾ ಹುಲಿಗಳು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 11:23 IST
Last Updated 15 ನವೆಂಬರ್ 2019, 11:23 IST
   

ಇಂದೋರ್: ಇಲ್ಲಿನ ಹೋಳ್ಕರ್ ಅಂಗಳದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕನ್ನಡಿಗ ಮಯಂಕ್‌ ಅಗರವಾಲ್‌ ದ್ವಿಶತಕ ಸಿಡಿಸಿದರು.

ಆರಂಭಿಕ ರೋಹಿತ್‌ ಶರ್ಮಾ(6) ಹಾಗೂ ನಾಯಕ ವಿರಾಟ್‌ ಕೊಹ್ಲಿ(0) ವೈಫಲ್ಯ ಅನುಭವಿಸಿದ ಪಂದ್ಯದಲ್ಲಿ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಮಯಂಕ್‌, ಬಲ ತುಂಬಿದರು. ಬಾಂಗ್ಲಾ ಹುಲಿಗಳನ್ನು ಇನ್ನಿಲ್ಲದಂತೆ ಕಾಡಿದ ಅವರು, 330 ಎಸೆತಗಳಲ್ಲಿ 28 ಬೌಂಡರಿ ಹಾಗೂ 8ಮನಮೋಹಕ ಸಿಕ್ಸರ್‌ಗಳೊಂದಿಗೆ 243ರನ್‌ ಗಳಿಸಿದರು. ಅವರಿಗೆ ಟೆಸ್ಟ್‌ ಪರಿಣತ ಚೇತೇಶ್ವರ ಪೂಜಾರ, ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಆಲ್ರೌಂಡರ್‌ ರವೀಂದ್ರ ಜಡೇಜಾಉತ್ತಮ ಬೆಂಬಲ ನೀಡಿದರು.

ಮೂರು ಉತ್ತಮ ಜತೆಯಾಟಗಳಲ್ಲಿ ಪಾಲುದಾರಿಕೆ ವಹಿಸಿದ ಮಯಂಕ್‌,ಪೂಜಾರ(54) ಜೊತೆ ಎರಡನೇ ವಿಕೆಟ್‌ಗೆ 91ರನ್‌ ಕೂಡಿಸಿದರು. ನಾಲ್ಕನೇ ವಿಕೆಟ್‌ಗೆ ರಹಾನೆ(86) ಜೊತೆಗೂಡಿ 190ರನ್‌ ಹಾಗೂ 5ನೇ ವಿಕೆಟ್‌ಗೆ ಜಡೇಜಾ ಜೊತೆ 123ರನ್‌ ಗಳಿಸಿದರು.

ADVERTISEMENT

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾ, ಕೇವಲ 150ರನ್‌ ಗಳಿಸಿ ಆಲೌಟ್‌ ಆಗಿತ್ತು. ಸದ್ಯ ಬ್ಯಾಟಿಂಗ್‌ ಮುಂದುವರಿಸಿರುವ ಭಾರತ112ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 467 ರನ್‌ ಗಳಿಸಿದೆ. ಒಟ್ಟು 317ರನ್‌ ಮುನ್ನಡೆ ಸಾಧಿಸಿದೆ. ಜಡೇಜಾ ವೇಗದ ಆಟಕ್ಕೆ ಮುಂದಾಗಿದ್ದು, 69ಎಸೆತಗಳಲ್ಲಿ 48ರನ್‌ ಗಳಿಸಿದ್ದಾರೆ. ವೇಗದ ಬೌಲರ್‌ ಉಮೇಶ್‌ ಯಾದವ್‌(12),ಜಡೇಜಾ ಜೊತೆ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.