ಅಭಿಷೇಕ್ ಶರ್ಮಾ
ರಾಯಿಟರ್ಸ್ ಚಿತ್ರ
ಮುಂಬೈ: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಗಳಿಸಿದ ಅಮೋಘ ಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಎದುರಿನ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಅಕ್ಷರಶಃ ಅಬ್ಬರಿಸಿದ ಅಭಿಷೇಕ್, ಅಭಿಮಾನಿಗಳಿಗೆ ರಸದೌತಣ ನೀಡಿದರು. ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ಆರಂಭಿಸಿದರು. ಅವರ ಬೀಸಾಟದ ಬಲದಿಂದ ಪವರ್ ಪ್ಲೇ ವೇಳೆಗೆ 92 ರನ್ ಗಳಿಸಿದ ಟೀಂ ಇಂಡಿಯಾ, 10 ಓವರ್‌ಗಳ ಅಂತ್ಯಕ್ಕೆ 143 ರನ್ ಗಳಿಸಿತು.
ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (7 ಎಸೆತ, 16 ರನ್) ಬೇಗನೆ ಔಟಾದರು. ನಂತರ ಜೊತೆಯಾದ ಶರ್ಮಾ ಹಾಗೂ ತಿಲಕ್ ವರ್ಮಾ, 2ನೇ ವಿಕೆಟ್ ಪಾಲುದಾರಿಕೆಯಲ್ಲಿ 115 ರನ್ ಕೂಡಿಸಿದರು. ಇದರಲ್ಲಿ ವರ್ಮಾ ಗಳಿಸಿದ್ದು 24 ರನ್ ಮಾತ್ರ.
ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ (2 ರನ್) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಶರ್ಮಾ ಜೊತೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಶಿವಂ ದುಬೆ 13 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ (9 ರನ್), ರಿಂಕು ಸಿಂಗ್ (9 ರನ್) ಆಟ ನಡೆಯಲಿಲ್ಲ.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಶರ್ಮಾ ಅಬ್ಬರ ಕಡಿಮೆಯಾಗಲಿಲ್ಲ. ಆದರೆ, ತಂಡದ ರನ್ ಗಳಿಕೆಯ ವೇಗ ತಗ್ಗಿತು.
17 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಭಾರತ ಪರ ಎರಡನೇ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ ಶರ್ಮಾ, ಸ್ವಲ್ಪ ಹೊತ್ತಿನಲ್ಲೇ ಮೂರಂಕಿಯನ್ನೂ ಮುಟ್ಟಿದರು. ಅದಕ್ಕಾಗಿ ಅವರು ತೆಗೆದುಕೊಂಡದ್ದು ಕೇವಲ 37 ಎಸೆತ.
ಒಟ್ಟು 54 ಎಸೆತಗಳನ್ನು ಎದುರಿಸಿ, 135 ರನ್ ಗಳಿಸಿದ್ದ ಅವರನ್ನು ಆದಿಲ್ ರಶೀದ್ ಔಟ್ ಮಾಡಿದರು. ಅವರ ಇನಿಂಗ್ಸ್‌ನಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು. ಟೀಂ ಇಂಡಿಯಾ ಪರ ಇದು, ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
18ನೇ ಓವರ್‌ನ ಕೊನೇ ಎಸೆತದಲ್ಲಿ ಶರ್ಮಾ ಔಟಾದ ನಂತರ ಹೆಚ್ಚು ರನ್ ಬರಲಿಲ್ಲ. ಕೊನೇ ಎರಡು ಓವರ್‌ಗಳಲ್ಲಿ ಟೀಂ ಇಂಡಿಯಾ ಗಳಿಸಿದ್ದು 10 ರನ್ ಮಾತ್ರ.
ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು.
ಬ್ರೇಯ್ಡನ್ ಕರ್ಸ್ ಮೂರು ವಿಕೆಟ್ ಪಡೆದರೆ, ಮಾರ್ಕ್ ವುಡ್ ಎರಡು ವಿಕೆಟ್ ಕಿತ್ತರು. ಜೋಫ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.