
ಕೊಹ್ಲಿ
ಇಂದೋರ್: ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪಾರಮ್ಯಕ್ಕೆ ಈಗ ಸವಾಲು ಎದುರಾಗಿದೆ. ದೃಢಸಂಕಲ್ಪದಿಂದ ಆಡುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಭಾನುವಾರ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆತಿಥೇಯರಿಗೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಭಾರತ ತಂಡವು 2019ರ ಮಾರ್ಚ್‌ನಿಂದ ತವರಿನಲ್ಲಿ ದ್ವಿಪಕ್ಷೀಯ ಸರಣಿ ಸೋತೇ ಇಲ್ಲ. ಏಳು ವರ್ಷಗಳ ಹಿಂದೆ ಪ್ರವಾಸಿ ಆಸ್ಟ್ರೇಲಿಯಾ ತಂಡ 0–2 ಹಿನ್ನಡೆಯಿಂದ ಚೇತರಿಸಿಕೊಂಡು ಭಾರತ ತಂಡ ವಿರುದ್ಧ 3–2 ಜಯಗಳಿಸಿತ್ತು.
ಭಾರತದಷ್ಟೇ ನ್ಯೂಜಿಲೆಂಡ್‌ಗೂ ಈ ಪಂದ್ಯ ಮಹತ್ವದ್ದು. ಏಕೆಂದರೆ ಕಿವೀಸ್ ಪಡೆ 1989ರಿಂದ ಭಾರತದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಆಡುತ್ತಿದೆ. ಆದರೆ ಹಿಂದೆಂದೂ ಸರಣಿ ಗೆದ್ದಿಲ್ಲ. ಈಗ ಅದರ ಮುಂದೆ ಸುವರ್ಣಾವಕಾಶವಿದೆ.
ಇಲ್ಲಿ ಮತ್ತೊಂದು ಹಿನ್ನಡೆಯಾಗುವುದು ಕೋಚ್ ಗೌತಮ್ ಗಂಭೀರ್ ಪಾಲಿಗೆ ಬೇಕಿಲ್ಲದ ಸಂಗತಿ. ಅವರು ತರಬೇತುದಾರರಾದ ನಂತರ ಭಾರತ ತವರಿನಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಸೋತಿದ್ದು, ಕೆಲವು ಅನಪೇಕ್ಷಿತ ದಾಖಲೆಗಳಾಗಿವೆ. ಮೊದಲ ಬಾರಿ ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನೂ ಭಾರತ ಸೋತಿತ್ತು.
ರಾಜಕೋಟ್‌ನಲ್ಲಿ ಎರಡನೇ ಪಂದ್ಯದಲ್ಲಿ ಭಾರತದ ಸೋಲಿಗೆ ಡೇರಿಲ್ ಮಿಚೆಲ್ ಅವರ ಅಸಾಧಾರಣ ಶತಕದ ಆಟ ಕಾರಣವಾಯಿತು. ಮಧ್ಯಮ ಹಂತದ ಓವರುಗಳಲ್ಲಿ ಅವರು ತಂಡಕ್ಕೆ ಮೇಲುಗೈ ಒದಗಿಸಿದರು. ಸ್ಪಿನ್ ಬೌಲಿಂಗ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಮೊನಚು ಕಳೆದುಕೊಂಡಿದ್ದು ನ್ಯೂಜಿಲೆಂಡ್ ಇನಿಂಗ್ಸ್ ವೇಳೆ ಜಾಹೀರಾಗಿತ್ತು.
ಹೋಳ್ಕರ್ ಕ್ರೀಡಾಂಗಣದಲ್ಲಿ ಬೌಂಡರಿ ಗಡಿಗಳು ಹತ್ತಿರದಲ್ಲಿದ್ದು, ರನ್ ಹೊಳೆ ಹರಿಯುವ ನಿರೀಕ್ಷೆಯಿದೆ. ಇಲ್ಲಿನ ಪಿಚ್ ಸಹ ಬೌಲರ್‌ಸ್ನೇಹಿಯಾಗಿಲ್ಲ. ಸ್ಪಿನ್ ದಾಳಿ ನಿಭಾಯಿಸುವಲ್ಲಿ ಶುಭಮನ್ ಗಿಲ್ ಬಳಗದ ಸಾಮರ್ಥ್ಯದ ಬಗ್ಗೆ ಅನುಮಾನಗಳು ಶುರುವಾಗಿವೆ. ಬ್ಯಾಟಿಂಗ್‌ನಲ್ಲಿ ಅನುಭವ ಮತ್ತು ಆಳ ಇದ್ದರೂ, ಸ್ಪಿನ್ ಎದುರಿಸುವಲ್ಲಿ ಮೊದಲಿನ ವಿಶ್ವಾಸ ಕಾಣುತ್ತಿಲ್ಲ.
ರೋ–ಕೊ ಮೇಲೆ ಗಮನ: ಅನುಭವಿ ಆರಂಭ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ದೊಡ್ಡ ಇನಿಂಗ್ಸ್ ಆಡಿಲ್ಲ. ಆಕ್ರಮಣದ ಆಟದಿಂದ ಭಾರತಕ್ಕೆ ಬಿರುಸಿನ ಆರಂಭ ನೀಡುವ ಅವರು ಎರಡು ಪಂದ್ಯಗಳಲ್ಲಿ ಬೇಗ ನಿರ್ಗಮಿಸಿದ್ದಾರೆ. ಹೀಗಾಗಿ ಅವರ ಮೇಲೆ ಒತ್ತಡವಿದೆ.
ಭಾರತದ ಬ್ಯಾಟಿಂಗ್ ಈಗಲೂ ವಿರಾಟ್ ಕೊಹ್ಲಿ ಆಟವನ್ನು ಅವಲಂಬಿಸಿದೆ. ಅವರು ಯಶಸ್ಸೂ ಗಳಿಸುತ್ತಿದ್ದಾರೆ. ಭಾರತದ ಮುಂದಿನ ಏಕದಿನ ಸರಣಿ ಜುಲೈನಲ್ಲಿ (ಇಂಗ್ಲೆಂಡ್ ಪ್ರವಾಸದ ವೇಳೆ) ಇರುವ ಕಾರಣ ಅವರಿಂದ ಅಭಿಮಾನಿಗಳು ಉತ್ತಮ ಇನಿಂಗ್ಸ್ ಬಯಸಿದ್ದಾರೆ.
ಐದನೇ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಸಮತೋಲನದ ಸವಾಲು: ಭಾರತ ನಿತೀಶ್ ಕುಮಾರ್ ರೆಡ್ಡಿ ಮತ್ತು ಆಯುಷ್ ಬಡೋನಿ ಅವರ ನಡುವೆ ಯಾರನ್ನು ಆಡಿಸಬೇಕೆಂಬ ತುಮುಲ ತಂಡಕ್ಕಿದೆ. ರೆಡ್ಡಿ ವೇಗದ ಬೌಲಿಂಗ್ ಜೊತೆಗೆ ಕೆಳಕ್ರಮಾಂಕದಲ್ಲಿ ಆಡಬಲ್ಲರು. ಆಯುಷ್ ಅವರು ತಾಂತ್ರಿಕವಾಗಿ ಉತ್ತಮ ಬ್ಯಾಟರ್. ಸ್ಪಿನ್ನರ್‌ಗಳನ್ನು ವಿಶ್ವಾಸದಿಂದ ಆಡುವುದರ ಜೊತೆಗೆ ಮಧ್ಯಮ ಹಂತದ ಓವರುಗಳಲ್ಲಿ ರನ್ ವೇಗ ಹೆಚ್ಚಿಸಬಲ್ಲ ಆಟಗಾರ. ಎಡಗೈ ವೇಗಿ ಅರ್ಷದೀಪ್ ಅವರನ್ನು ಆಡಿಸುವ ಸಾಧ್ಯತೆಯೂ ಇದೆ. ಸ್ವಿಂಗ್ ಜೊತೆಗೆ ಯಾರ್ಕರ್‌ಗಳನ್ನು ಎಸೆಯುವ ಅವರು ದಾಳಿಗೆ ವೈವಿಧ್ಯತೆ ನೀಡಬಲ್ಲರು. ಅವರ ಸೇರ್ಪಡೆ ಸ್ಪಿನ್ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು.
ನ್ಯೂಜಿಲೆಂಡ್ ತಂಡವೂ ವಿಶ್ವಾಸದಲ್ಲಿದೆ. ಡೇರಿಲ್ ಮಿಚೆಲ್ ಆಡುತ್ತಿರುವ ರೀತಿ, ಅವರಿಗೆ ಡೆವಾನ್ ಕಾನ್ವೆ ನೀಡುತ್ತಿರುವ ಬೆಂಬಲವು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೌಲರ್‌ಗಳ ವಿಭಾಗದಲ್ಲಿ ದೊಡ್ಡ ಹೆಸರುಗಳಿಲ್ಲದಿದ್ದರೂ ವೈವಿಧ್ಯಕ್ಕೆ ಕೊರತೆಯಿಲ್ಲ.
ಪಂದ್ಯ ಆರಂಭ: ಮಧ್ಯಾಹ್ನ 1.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.