ಆರ್.ಪ್ರೇಮದಾಸ ಕ್ರಿಕೆಟ್ ಮೈದಾನ
ಚಿತ್ರ: @author_bsdara
ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷತ ಪಂದ್ಯ ಇಂದು (ಭಾನುವಾರ) ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಹವಾಮಾನದ ವೈಪರೀತ್ಯ ಪಂದ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಆಯೋಜನೆಗೊಂಡ ಬಳಿಕ, ರಾಜತಾಂತ್ರಿಕ ಕಾರಣದಿಂದಾಗಿ ಪಂದ್ಯ ನಡೆಯುವುದು ಅನುಮಾನ ಎಂಬ ವಾತಾವರಣ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆಡುವುದಿಲ್ಲ. ಈ ಎಲ್ಲಾ ಗೊಂದಲಗಳು ಬಗೆಹರಿದಿದೆ. ಆದರೆ, ಮಳೆ ಬರುವ ಸಾಧ್ಯತೆ ಇದ್ದು, ಪಂದ್ಯ ಆರಂಭದ ಮೇಲೆ ಅನಿಶ್ಚಿತತೆ ಉಂಟು ಮಾಡಿದೆ.
ಈಗ ಹೇಗಿದೆ ಕೊಲೊಂಬೊದ ವಾತಾವರಣ?
ಕೊಲಂಬೊದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಶೇ 96ರಷ್ಟಿದೆ ಎಂದು ಅಕ್ಯೂವೆದರ್ ಮುನ್ಸೂಚನೆ ನೀಡಿದೆ. ಗಂಟೆಗೊಮ್ಮೆ ನೀಡುವ ಮುನ್ಸೂಚನೆಯ ಪ್ರಕಾರ, ಸಂಜೆ 6 ಗಂಟೆಯವರೆಗೆ ಮಳೆಯಾಗುವ ಸಾಧ್ಯತೆ ಶೇ 40ಕ್ಕಿಂತ ಹೆಚ್ಚಿದ್ದು, 7 ಗಂಟೆಯ ಬಳಿಕ ಅದು ಶೇ 9ಕ್ಕೆ ಇಳಿಯುತ್ತದೆ.
ದಿನದ ಕೊನೆಯಲ್ಲಿ ಮಳೆಯಾಗುವ ಸಂಭವ ಇಲ್ಲವಾದರೂ, ದಿನವಿಡೀ ಮಳೆ ಸುರಿದು ಪಿಚ್ ಒದ್ದೆಯಾದರೆ, ಪಂದ್ಯದ ಆರಂಭ ವಿಳಂಬವಾಗುವ ಸಾಧ್ಯತೆ ಇರುತ್ತದೆ ಅಥವಾ ಓವರ್ ಕಡಿತಗೊಳಿಸಿ ಪಂದ್ಯ ಅರಂಭಿಸುವ ಸಾಧ್ಯತೆ ಕೂಡ ಇರಲಿದೆ.
ಮಳೆ ನಿಂತ 20 ನಿಮಿಷಕ್ಕೆ ಪಂದ್ಯ ಪುನರಾರಂಭ
ಕ್ರಿಕೆಟ್ ಅಭಿಮಾನಿಗಳು ಮಳೆ ಬಂದರೂ ಕೂಡ ಪಂದ್ಯ ನಡೆಯುವುದೇ ಇಲ್ಲ ಎಂಬ ಆತಂಕ ಬೇಡ. ಏಕೆಂದರೆ, ಮಳೆ ನಿಂತ 20 ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕೊಲೊಂಬೊದ ಆರ್. ಪ್ರೇಮದಾಸ ಮೈದಾನವನ್ನು ಮರಳಿ ಸಿದ್ಧಪಡಿಸಿ ಪಂದ್ಯಕ್ಕೆ ಅನುವು ಮಾಡಿಕೊಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.