
ದುಬೈ: ಫೆಬ್ರುವರಿ 15ರಂದು ನಿಗದಿಯಾಗಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದ ಕುರಿತಂತೆ ಮಾತುಕತೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು(ಐಸಿಸಿ) ಸಂಪರ್ಕಿಸಿದೆ.
ಸರ್ಕಾರದ ಸೂಚನೆಯಿಂದಾಗಿ ಭಾರತ ವಿರುದ್ಧದ ಪಂದ್ಯದಿಂದ ಕೊನೆಯ ನಿಮಿಷದಲ್ಲಿ ಹಿಂದೆ ಸರಿದಿದ್ದಕ್ಕೆ ಫೋರ್ಸ್ ಮಜೂರ್ ನಿಯಮದ ಷರತ್ತನ್ನು ಅನುಸರಿಸಿದ್ದ ಬಗ್ಗೆ ಪಾಕ್ ಸಮರ್ಥಿಸಿಕೊಂಡಿತ್ತು. ಇದರ ಬೆನಲ್ಲೇ, ಭಾರಿ ದಂಡ ಮತ್ತು ಎದುರಾಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಐಸಿಸಿಯು ಪಿಸಿಬಿಗೆ ವಿವರಿಸಿತ್ತು.
ವಿಶ್ವಕಪ್ ಟಿ20 ಪಂದ್ಯಾವಳಿಯ ಉದ್ಘಾಟನಾ ದಿನದಂದು ಈ ಹಠಾತ್ ಬದಲಾವಣೆಯು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾದಾಟದ ಪಂದ್ಯ ನಡೆಯುವ ನಿರೀಕ್ಷೆ ಹೆಚ್ಚಿಸಿದೆ.
ಫೋರ್ಸ್ ಮಜೂರ್‌ನಿಂದಾಗಿ ಉಂಟಾಗಬಹುದಾದ ಹಣಕಾಸಿನ ನಷ್ಟದ ಬಗ್ಗೆ ಐಸಿಸಿ, ಪಿಸಿಬಿಗೆ ತಿಳಿಸಿದ ನಂತರ, ಈ ಬದಲಾವಣೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಐಸಿಸಿ ಈಗ ಸಮಸ್ಯೆಯನ್ನು ಪರಿಹರಿಸಲು ರಚನಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳುತ್ತದೆ. ಘರ್ಷಣೆಯಲ್ಲ, ಸಂಭಾಷಣೆ ಇರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಸಿಬಿ ಎತ್ತಿರುವ ಫೋರ್ಸ್ ಮಜೂರ್ ಷರತ್ತು, ಐಸಿಸಿ ಒಪ್ಪಂದವನ್ನು ಪೂರೈಸದಂತೆ ತಡೆಯಬಹುದಾದ ಅನಿರೀಕ್ಷಿತ ಸಂದರ್ಭಗಳನ್ನು ಸೂಚಿಸುತ್ತದೆ. ಪಂದ್ಯ ಬಹಿಷ್ಕಾರಕ್ಕೆ ಐಸಿಸಿಯೊಂದಿಗೆ ಈ ಷರತ್ತನ್ನು ಉಲ್ಲೇಖಿಸಿದ್ದ ಪಿಸಿಬಿ, ಈ ಸಂಬಂಧ ತಮ್ಮ ಸರ್ಕಾರದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಸಹ ಲಗತ್ತಿಸಿತ್ತು.
ಪಾಕಿಸ್ತಾನ ಸರ್ಕಾರದ ಹಸ್ತಕ್ಷೇಪದ ನಂತರ ಪಂದ್ಯ ಬಹಿಷ್ಕಾರದ ನಿರ್ಧಾರ ಕೈಗೊಂಡ ಪಿಸಿಬಿಗೆ ಐಸಿಸಿ ಸಂಭಾವ್ಯ ಪರಿಣಾಮಗಳನ್ನು ನೆನಪಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.
ಪಾಕ್ ಮೇಲೆ ಯಾವುದೇ ನಿರ್ಬಂಧಗಳನ್ನೂ ಐಸಿಸಿ ಪ್ರಸ್ತಾಪಿಸದಿದ್ದರೂ ಪಾಕಿಸ್ತಾನ ಮಂಡಳಿಯ ನಿರ್ಧಾರದಿಂದ ಪ್ರಸಾರದ ಹಕ್ಕು ಪಡೆದವರಿಗೆ ದೊಡ್ಡ ನಷ್ಟವನ್ನು ಉಂಟುಮಾಡುವುದರಿಂದ ಭಾರಿ ದಂಡವನ್ನು ಎದುರಿಸಬೇಕಾಗಬಹುದು ಎಂದು ವಿವರಿಸಿತ್ತು. ಅಲ್ಲದೇ, ತಾತ್ಕಾಲಿಕವಾಗಿ ದ್ವಿಪಕ್ಷೀಯ ಸರಣಿಗಳಿಗೂ ಪಾಕಿಸ್ತಾನಕ್ಕೆ ನಿಷೇಧ ಹೇರುವ ಸಾಧ್ಯತೆಯೂ ಇತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.