ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ನಾವು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುತ್ತೇವೆ ಎಂದು ಭಾರತ ಟಿ–20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಹೇಳಿದ್ದಾರೆ.
ಏಷ್ಯಾ ಕಪ್‌ಗೂ ಮುನ್ನ ನಡೆದ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
‘ಭಾರತ ತಂಡವು ಮೈದಾನದಲ್ಲಿ ಆಕ್ರಮಕಾರಿ ಆಟವನ್ನು ಆಡಲು ಬಯಸುತ್ತದೆ. ನಾವು ಗೆಲ್ಲಲು ಬಯಸಿದಾಗ, ಆಕ್ರಮಣಶೀಲವಾಗಿ ಆಡಲೇಬೇಕಾಗುತ್ತದೆ’ಎಂದು ಹೇಳಿದ್ದಾರೆ.
‘ಭಾರತವು ಏಷ್ಯಾ ಕಪ್‌ಗೂ ಮುನ್ನ ಉತ್ತಮ ಅಭ್ಯಾಸ ಮಾಡಿದ್ದು, ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದೇವೆ. ನಾವು ಟೂರ್ನಿಯಲ್ಲಿ ಯಾವುದೇ ತಂಡವನ್ನು ಕೂಡ ಕಡೆಗಣಿಸುವುದಿಲ್ಲ. ಯುಎಇ ತಂಡವು ಕೂಡ ಉತ್ತಮ ಲಯದಲ್ಲಿದ್ದು, ಇತ್ತೀಚೆಗೆ ಜರುಗಿದ ತ್ರಿಕೋನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಏಷ್ಯಾ ಕಪ್‌ನಲ್ಲಿ ಅವರು ಗೆಲುವಿನ ಗಡಿ ದಾಟಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವು ಎಲ್ಲಾ ವಿಭಾಗಗಳಲ್ಲಿ ಸಮತೋಲಿತವಾಗಿದ್ದು, ಪಂದ್ಯದ ವೇಳೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ಪ್ರಶ್ನೆಗೆ ಉತ್ತರಿಸಿರುವ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ‘ಭಾರತವು ಆಕ್ರಮಣಕಾರಿಯಾಗಿ ಆಡುವುದು ಅವರ ನಿರ್ಧಾರ. ನಾನು ನನ್ನ ಕಡೆಯಿಂದ ಯಾರಿಗೂ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ’ ಎಂದಿದ್ದಾರೆ.
ಟಿ–20 ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತವು ಎ ಗುಂಪಿನಲ್ಲಿದೆ. ಸೆ.10 ರಂದು ಯುಎಇ ತಂಡವನ್ನು ಎದುರಿಸಲಿದೆ. ಭಾನುವಾರ(ಸೆ.14) ಪಾಕಿಸ್ತಾನ ವಿರುದ್ದ ಕಣಕ್ಕಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.