ತೆಂಬ ಬವುಮಾ
ಚಿತ್ರ: @ESPNcricinfo
ಗುವಾಹಟಿ: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನಗೆ ದಕ್ಷಿಣ ಆಫ್ರಿಕಾ ತಂಡ 549 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿದೆ.
ಎರಡನೇ ಇನಿಂಗ್ಸ್ ಆರಂಭಿಸಿದ ಭಾರತದ ಪರ ಆರಂಭಿಕರು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು ಯಶಸ್ವಿ ಜೈಸ್ವಾಲ್ (13) ಹಾಗೂ ಕೆ.ಎಲ್. ರಾಹುಲ್ (6) ರನ್‌ಗಳಿಸಿ ಔಟ್ ಆದರು. ಸದ್ಯ, 2 ರನ್ ಗಳಿಸಿರುವ ಸಾಯಿ ಸುದರ್ಶನ್ ಹಾಗೂ 4 ರನ್ ಗಳಿಸಿರುವ ಕುಲದೀಪ್ ಯಾದವ್ ಕ್ರೀಸ್‌ನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್ ಹಾಗೂ ಸೈಮನ್ ಹಾರ್ಮರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಮೊದಲ ಇನಿಂಗ್ಸ್‌ನ 288 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 260/5 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಭಾರತ ಗೆಲುವಿಗೆ 549ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
ರಯಾನ್ ರಿಕೆಲ್ಟನ್ (35) ಹಾಗೂ ಏಡೆನ್ ಮಾರ್ಕರಂ (29) ಮೊದಲ ವಿಕೆಟ್‌ಗೆ 59 ರನ್‌ಗಳ ಜೊತೆಯಾಟ ಕಟ್ಟಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜ ಯಶಸ್ವಿಯಾದರು.
ನಾಯಕ ತೆಂಬ ಬವುಮಾ (3) ವಿಕೆಟ್ ಅನ್ನು ವಾಷಿಂಗ್ಟನ್ ಸುಂದರ್ ಕಬಳಿಸಿದರು. ಬಳೀಕ ಟ್ರಿಸ್ಟನ್ ಸ್ಟಬ್ಸ್ (94) ಹಾಗೂ ಟೋನಿ ಡಿ ಝೊರ್ಜಿ (49) ರನ್ ಗಳಿಸಿದರು. ಆಲ್‌ರೌಂಡರ್ ವಿಯಾನ್ ಮುಲ್ಡರ್ ಕೂಡ (ಅಜೇಯ 35) ರನ್ ಗಳಿಸಿದರು.
ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರವೀಂದ್ರ ಜಡೇಜ 4 ವಿಕೆಟ್ ಕಬಳಿಸಿದರು. ಹಾಗೂ ವಾಷಿಂಗ್‌ಟನ್ ಸುಂದರ್ 1 ವಿಕೆಟ್ ಪಡೆದುಕೊಂಡರು.
ದಕ್ಷಿಣ ಆಫ್ರಿಕಾದ 489 ರನ್‌ಗಳಿಗೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 201 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ದ.ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 288 ರನ್‌ಗಳ ಮುನ್ನಡೆ ಗಳಿಸಿತು. ಆತಿಥೇಯರಿಗೆ ಫಾಲೋ ಆನ್ ಹೇರುವ ಅವಕಾಶ ಇದ್ದರೂ ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ ಮುಂದುವರಿಸಲು ನಿರ್ಧರಿಸಿತ್ತು.
ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ, ಸರಣಿ ಸಮಬಲಗೊಳಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.