ADVERTISEMENT

ದ.ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯ ಇಂದು: ಸರಣಿ ಜಯದತ್ತ ಭಾರತ ತಂಡ ಚಿತ್ತ

ರಾಹುಲ್ ನಾಯಕತ್ವಕ್ಕೆ ಸವಾಲು

ಪಿಟಿಐ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ   –ಪಿಟಿಐ ಚಿತ್ರ
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ   –ಪಿಟಿಐ ಚಿತ್ರ   

ವಿಶಾಖಪಟ್ಟಣಂ: ಶನಿವಾರ ಇಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿಯೂ ಯಥಾಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರತ್ತಲೇ ಎಲ್ಲರ ಚಿತ್ತ ನೆಟ್ಟಿದೆ. 

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ವಿರಾಟ್ ಶತಕ ದಾಖಲಿಸಿದ್ದಾರೆ. ರೋಹಿತ್ ಕೂಡ ಅಬ್ಬರಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತವನ್ನೂ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಅದರಿಂದಾಗಿ ಸರಣಿಯು 1–1ರ ಸಮಬಲವಾಗಿದೆ. ಅದರಿಂದಾಗಿಯೇ ಕೊನೆಯ ಪಂದ್ಯವು ಕುತೂಹಲದ ಕೇಂದ್ರಬಿಂದುವಾಗಿದೆ. 

ಟೆಸ್ಟ್ ಸರಣಿಯಲ್ಲಿ 2–0ಯಿಂದ ಜಯಗಳಿಸಿರುವ ತೆಂಬಾ ಬವುಮಾ ಪಡೆಯು ಏಕದಿನ ಮಾದರಿಯಲ್ಲಿಯೂ ಮೇಲುಗೈ ಸಾಧಿಸುವ ಛಲದಲ್ಲಿದೆ. ಆದರೆ ತವರು ನೆಲದಲ್ಲಿಯೇ ಸತತ ಎರಡು ಸರಣಿ ಸೋಲುವುದು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಬಹುದು. ಆದ್ದರಿಂದ ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಬಳಗವು ಜಯಿಸಲೇಬೇಕಾದ ಒತ್ತಡದಲ್ಲಿದೆ.

ADVERTISEMENT

ಏಕದಿನ ಕ್ರಿಕೆಟ್ ಮಾದರಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಅವರು ಅಪ್ರತಿಮ ಆಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ. ಅವರೊಂದಿಗೆ ಕೆಲವು ಯುವ ಆಟಗಾರರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ ಶತಕ ಬಾರಿಸಿದ್ದರು. ಆದರೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.  ಎಡಗೈ ಬ್ಯಾಟರ್ ತಮ್ಮ ಸ್ಕೋರ್‌ಗಳನ್ನು ದೊಡ್ಡ ಮೊತ್ತದಲ್ಲಿ ಪರಿವರ್ತಿಸುವಲ್ಲಿ ಯಶಸ್ವಿಯಾದರೆ ತಂಡಕ್ಕೆ ಉಪಯುಕ್ತವಾಗಲಿದೆ. ಆದರೆ ಅವರು ಎಡಗೈ ಬೌಲರ್‌ಗಳ ಎದುರು ವಿಕೆಟ್ ಒಪ್ಪಿಸುತ್ತಿರುವುದು ಚಿಂತೆಯ ವಿಷಯವಾಗಿದೆ. ಕಳೆದೆರಡೂ ಪಂದ್ಯಗಳಲ್ಲಯೂ ಅವರು ಕ್ರಮವಾಗಿ ಮಾರ್ಕೊ ಯಾನ್ಸೆನ್ ಮತ್ತು ನಾಂದ್ರೆ ಬರ್ಗರ್ ಅವರ ಎದುರು ಔಟಾಗಿದ್ದಾರೆ. 

ಇಲ್ಲಿಯ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವುದು ಈ ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿದೆ. ಆದ್ದರಿಂದ ಹೆಚ್ಚುವರಿ ಬ್ಯಾಟರ್ ಅವಕಾಶ ಪಡೆಯಬಹುದಾಗಿದೆ. ಕಳೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರೂ ಮಿಂಚಿದ್ದರು. 

ಆದರೆ ಭಾರತ ತಂಡದ ಬೌಲರ್‌ಗಳು ಶಿಸ್ತಿನ ಬೌಲಿಂಗ್ ಮಾಡುವುದು ಮುಖ್ಯವಾಗಿದೆ. ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರು ಹೋದ ಪಂದ್ಯದಲ್ಲಿ ಆರಂಭದಲ್ಲಿ ವಿಕೆಟ್ ಗಳಿಸಿದರು. ಆದರೆ ನಂತರದ ಹಂತದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಪ್ರಸಿದ್ಧಕೃಷ್ಣ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ದುಬಾರಿಯಾದರು. 

ಏಡನ್ ಮರ್ಕರಂ, ಡೆವಾಲ್ಡ್  ಬ್ರೆವಿಸ್ ಹಾಗೂ ನಾಯಕ ತೆಂಬಾ ಅವರು ಉತ್ತಮ ಲಯದಲ್ಲಿರುವುದು ಪ್ರವಾಸಿ ಬಳಗದಲ್ಲಿ ವಿಶ್ವಾಸ ಹೆಚ್ಚಿಸಿದೆ. ಎಡಗೈ ವೇಗಿ ಮಾರ್ಕೊ ಯಾನ್ದೆನ್, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್ ಅವರು ಆತಿಥೇಯ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ. 

ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸೆನ್ ಮತ್ತು ನಾಯಕ ತೆಂಬಾ ಬವುಮಾ  –ಪಿಟಿಐ ಚಿತ್ರ

ತಂಡಗಳು...

ಭಾರತ: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್) ರೋಹಿತ್ ಶರ್ಮಾ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ತಿಲಕ್ ವರ್ಮಾ ರಿಷಭ್ ಪಂತ್ (ವಿಕೆಟ್‌ಕೀಪರ್) ವಾಷಿಂಗ್ಟನ್ ಸುಂದರ್ ರವೀಂದ್ರ ಜಡೇಜ ಕುಲದೀಪ್ ಯಾದವ್ ನಿತೀಶ್ ಕುಮಾರ್ ರೆಡ್ಡಿ ಹರ್ಷಿತ್ ರಾಣಾ ಋತುರಾಜ್ ಗಾಯಕವಾಡ್ ಪ್ರಸಿದ್ಧ ಕೃಷ್ಣ ಅರ್ಷದೀಪ್ ಸಿಂಗ್ ಧ್ರುವ ಜುರೇಲ್ 

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಓಟ್ನೀಲ್ ಬಾರ್ತಮನ್ ಕಾರ್ಬಿನ್ ಬಾಷ್ ಮ್ಯಾಥ್ಯೂ ಬ್ರಿಝ್ಕೆ ಡೆವಾಲ್ಡ್ ಬ್ರೆವಿಸ್ ನಾಂದ್ರೆ ಬರ್ಗರ್ ಕ್ವಿಂಟನ್ ಡಿಕಾಕ್ ಟೋನಿ ಡಿ ಝಾರ್ಜಿ ರುಬಿನ್ ಹರ್ಮನ್‌ ಕೇಶವ್ ಮಹಾರಾಜ ಮಾರ್ಕೊ ಯಾನ್ಸೆನ್ ಏಡನ್ ಮರ್ಕರಂ ಲುಂಗಿ ಎನ್‌ಗಿಡಿ ರಿಯಾನ್ ರಿಕೆಲ್ಟನ್ ಪ್ರೆನೆಲನ್ ಸುಬ್ರಾಯೆನ್.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌, ಜಿಯೊ ಹಾಟ್‌ಸ್ಟಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.