ADVERTISEMENT

ಭಾರತ–ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌; ರಾಂಚಿಯಲ್ಲಿ ರಾರಾಜಿಸಿದ ರೋಹಿತ್–ರಹಾನೆ

ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 16:15 IST
Last Updated 19 ಅಕ್ಟೋಬರ್ 2019, 16:15 IST
   

ರಾಂಚಿ: ‘ಮುಂಬೈಕರ್’ ರೋಹಿತ್ ಶರ್ಮಾ ಶನಿವಾರ ಇಡೀ ದಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ರಾರಾಜಿಸಿದರು. ಅವರಿಗೆ ಇನ್ನೊಬ್ಬ ಮುಂಬೈಕರ್ ಅಜಿಂಕ್ಯ ರಹಾನೆ ಕೂಡ ಜೊತೆ ನೀಡಿದರು.

ಇವರಿಬ್ಬರ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದ ಭರಾಟೆಗೆ ದಕ್ಷಿಣ ಆಫ್ರಿಕಾ ತಂಡದವರು ಕಂಗಾಲಾದರು. ಮಳೆ ಮತ್ತು ಮಂದಬೆಳಕಿನಿಂದ ಪಂದ್ಯದ ಮೊದಲ ದಿನದಾಟ ಸ್ಥಗಿತವಾದಾಗ ಭಾರತ ತಂಡವು 58 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 224 ರನ್‌ ಗಳಿಸಿತು. ಸರಣಿಯಲ್ಲಿ ಮೂರನೇ ಶತಕ ದಾಖಲಿಸಿದ ‘ಹಿಟ್‌ಮ್ಯಾನ್’ ರೋಹಿತ್ ( ಬ್ಯಾಟಿಂಗ್ 117; 164ಎಸೆತ, 14ಬೌಂಡರಿ, 4ಸಿಕ್ಸರ್) ಮತ್ತು ಅಜಿಂಕ್ಯ ರಹಾನೆ (ಬ್ಯಾಟಿಂಗ್ 83; 135ಎಸೆತ, 11ಬೌಂಡರಿ 1ಸಿಕ್ಸರ್) ಕ್ರೀಸ್‌ನಲ್ಲಿದ್ದಾರೆ. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 185 ರನ್‌ ಸೇರಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಆಘಾತ ನೀಡಿದರು. ಐದನೇ ಓವರ್‌ನಲ್ಲಿ ಮಯಂಕ್ ಅಗರವಾಲ್ ಮತ್ತು ಒಂಬತ್ತನೇ ಓವರ್‌ನಲ್ಲಿ ಚೇತೇಶ್ವರ್ ಪೂಜಾರ ಅವರ ವಿಕೆಟ್ ಕಬಳಿಸಿದರು. ವಿರಾಟ್ ಕೊಹ್ಲಿ ಅವರನ್ನು ಎನ್ರಿಚ್ ನೋರ್ಟೆ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇದರಿಂದಾಗಿ 39 ರನ್‌ಗಳಿಗೆ 23 ವಿಕೆಟ್ ಕಳೆದುಕೊಂಡ ಆತಿಥೇಯ ತಂಡವು ಆತಂಕಕ್ಕೆ ಒಳಗಾಯಿತು.

ADVERTISEMENT

ಆದರೆ ಮುಂಬೈ ಜೋಡಿಯ ಆಟವು ಆತಂಕವನ್ನು ಹೊಡೆದೋಡಿಸಿತು. ಬೌಲರ್‌ಗಳು ಬಸವಳಿದರು. ಅದರಲ್ಲೂ ರೋಹಿತ್ ಆಟಕ್ಕೆ ಕಡಿವಾಣ ಹಾಕುವ ಯಾವ ಮಾರ್ಗವೂ ದಕ್ಷಿಣ ಆಫ್ರಿಕಾದ ಬೌಲಿಂಗ್ ಪಡೆಗೆ ಕಾಣಲೇ ಇಲ್ಲ. 22ನೇ ಓವರ್‌ನಲ್ಲಿ ಅವರ ಕ್ಯಾಚ್ ಪಡೆಯುವ ಅವಕಾಶವನ್ನು ಫೀಲ್ಡರ್ ಹಮ್ಜಾ ಕೈಚೆಲ್ಲಿದರು. ಇದು ಪ್ರವಾಸಿ ತಂಡಕ್ಕೆ ದುಬಾರಿಯಾಯಿತು.

ರೋಹಿತ್ 86 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅದರಲ್ಲಿ ಒಂದು ಸಿಕ್ಸರ್, ಎಂಟು ಬೌಂಡರಿಗಳಿದ್ದವು. ತಾವೆದುರಿಸಿದ 130ನೇ ಎಸೆತದಲ್ಲಿ ಶತಕ ಬಾರಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಅವರ ಆರನೇ ಶತಕ. ಒಟ್ಟು ನಾಲ್ಕು ಸಿಕ್ಸರ್ ಸಿಡಿಸಿದ ಅವರು ಸರಣಿಯೊಂದರಲ್ಲಿ 17 ಸಿಕ್ಸರ್‌ಗಳನ್ನು ದಾಖಲಿಸಿದ ವಿಶ್ದದ ಮೊದಲ ಬ್ಯಾಟ್ಸ್‌ಮನ್ ಆದರು. ವೆಸ್ಟ್ ಇಂಡೀಸ್ ತಂಡದ ಶಿಮ್ರೋನ್ ಹೆಟ್ಮೆಯರ್ (15 ಸಿಕ್ಸರ್) ದಾಖಲೆಯನ್ನು ಮುರಿದರು.

30ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅವರು ಒಟ್ಟು ಎರಡು ಸಾವಿರ ರನ್‌ಗಳನ್ನು ಸೇರಿಸಿದರು. ಇನ್ನೊಂದು ಕಡೆ ನಿರ್ಭಿತಿಯಿಂದ ಅಡಿದ ಅಜಿಂಕ್ಯ ರಹಾನೆ ಕೂಡ ಬೌಲರ್‌ಗಳಿಗೆ ಚಳ್ಳೇಹಣ್ಣು ತಿನ್ನಿಸಿದರು. 70ಎಸೆತಗಳಲ್ಲಿಯೇ ಅರ್ಧಶತಕ ಹೊಡೆದರು. ಆಕರ್ಷಕ ಡ್ರೈವ್, ಪೆಡಲ್‌ ಸ್ವೀಪ್‌ಗಳಿಂದ ನೋಡುಗರ ಮನರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.