ADVERTISEMENT

‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾದ ನಾಲ್ಕನೇ ಏಕದಿನ ಪಂದ್ಯ

ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವಿನ ಪಂದ್ಯ ಮಳೆಯಿಂದ ರದ್ದು; ಮತ್ತೊಮ್ಮೆ ಇಂದು

ಬಸವರಾಜ ಸಂಪಳ್ಳಿ
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
ಹುಬ್ಬಳ್ಳಿಯಲ್ಲಿ ಗುರುವಾರ ಶ್ರೀಲಂಕಾ ’ಎ‘ ತಂಡದ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ’ಎ‘ ತಂಡದ ಆರಂಭಿಕ ಆಟಗಾರ ಋತುರಾಜ್‌ ಗಾಯಕವಾಡ್‌ ಅವರು ಚೆಂಡನ್ನು ಬೌಂಡರಿಗೆ ಅಟ್ಟಿದ ಪರಿ–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಗುರುವಾರ ಶ್ರೀಲಂಕಾ ’ಎ‘ ತಂಡದ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ’ಎ‘ ತಂಡದ ಆರಂಭಿಕ ಆಟಗಾರ ಋತುರಾಜ್‌ ಗಾಯಕವಾಡ್‌ ಅವರು ಚೆಂಡನ್ನು ಬೌಂಡರಿಗೆ ಅಟ್ಟಿದ ಪರಿ–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಭಾರತ ‘ಎ’ ಮತ್ತು ಶ್ರೀಲಂಕಾ‘ಎ’ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಾಲ್ಕನೇ ಏಕ ದಿನ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಯಿತು. ಜೂನ್‌ 14ರಂದು ಹೊಸದಾಗಿ ಆಡಿಸಲು ಬಿಸಿಸಿಐ ತೀರ್ಮಾನಿಸಿದ ಪರಿಣಾಮ ಈ ಪಂದ್ಯವು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಯಿತು.

ಬೆಳಿಗ್ಗೆಯೇ ಮಳೆ ಸುರಿದ ಕಾರಣ ಪಂದ್ಯವನ್ನು 24 ಒವರ್‌ಗಳಿಗೆ ಕಡಿತಗೊಳಿಸಿ, ನಿಗದಿತ ಸಮಯದ ಬದಲು ಮಧ್ಯಾಹ್ನ 1.15ಕ್ಕೆ ಆರಂಭಿಸಲಾಯಿತು. ಟಾಸ್‌ ಗೆದ್ದ ಸಿಂಹಳೀಯರು ಫೀಲ್ಡಿಂಗ್‌ ಆಯ್ದುಕೊಂಡರು. 20ನೇ ಒವರ್‌ ನಡೆಯುತ್ತಿದ್ದ ವೇಳೆ ಮಳೆ ಸುರಿದ ಪರಿಣಾಮ 15 ನಿಮಿಷ ಆಟವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಮತ್ತೊಮ್ಮೆ ಪಂದ್ಯವನ್ನು 22 ಒವರ್‌ಗೆ ಕಡಿತಗೊಳಿಸಲಾಯಿತು. ಹೊಡಿಬಡಿ ಆಟಕ್ಕೆ ಮುಂದಾದ ಆಥಿತೇಯರು 4 ವಿಕೆಟ್‌ ಕಳೆದುಕೊಂಡು, 208 ರನ್‌ಗಳನ್ನು ಕಲೆಹಾಕಿದರು.

ಭಾರತದ ಪರವಾಗಿ ಋತುರಾಜ್‌ ಗಾಯಕವಾಡ್‌ 84(59), ಅನ್ಮೋಲ್‌ ಪ್ರೀತ್‌ ಸಿಂಗ್‌ ಔಟ್‌ ಆಗದೇ 85(46)ಉತ್ತಮ ಜೊತೆಯಾಟ(125) ಆಡುವ ಮೂಲಕ ಬೃಹತ್‌ ಮೊತ್ತ ಪೇರಿಸಿದರು.

ADVERTISEMENT

ಶುಭ್‌ಮನ್‌ ಗಿಲ್‌ 19(21), ದೀಪಕ್‌ ಹೂಡಾ 11(5), ಪ್ರಶಾಂತ್‌ ಛೋಪ್ರಾ 6(1) ರನ್‌ ಗಳಿಸಿದರು. ತಂಡದ ನಾಯಕ ಇಶಾನ್‌ ಕಿಶನ್‌ ಒಂದೂ ರನ್‌ ಗಳಿಸದೇ ಔಲ್ಡ್‌ ಆಗುವ ಮೂಲಕ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರು.

ಶ್ರೀಲಂಕಾ ಪರ ಬೌಲರ್‌ಗಳಾದ ಲಾಹಿರು ಕುಮಾರ ಎರಡು ವಿಕೆಟ್‌ ಕಬಳಿಸಿ, 34 ರನ್‌ ನೀಡಿದರು. ಉಳಿದಂತೆ ಲಕ್ಷಣ್‌ ಸಂದಕೇನ್‌ 1 ವಿಕೆಟ್‌ಗೆ 36 ಹಾಗೂ ಚಮಿಕ ಕರುಣರತ್ನೆ 1 ವಿಕೆಟ್‌ಗೆ 57 ಮತ್ತು ಇಶಾನ್‌ ಜಯರತ್ನೆ ಒಂದೂ ವಿಕೆಟ್‌ ಇಲ್ಲದೇ 49 ರನ್‌ ನೀಡಿದರು.

ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಲಂಕನ್ನರು, ಮೊದಲ ಒವರ್‌ನಲ್ಲೇ ನಿಶಾನ್‌ ಡಿಕ್ವೆಲ್ಲಾ ವಿಕೆಟ್‌ ಅನ್ನು ವಾಷಿಂಗ್ಟನ್‌ ಸುಂದರ್‌ಗೆ ಒಪ್ಪಿಸಿದರು. ಎರಡನೇ ಒವರ್‌ ಆರಂಭವಾಗುತ್ತಿದ್ದಂತೆ ಭಾರಿ ಮಳೆ ಸುರಿದು, ಪಿಚ್‌ ಒದ್ದೆಯಾದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

1.5 ಒವರ್‌ಗೆ ಒಂದು ವಿಕೆಟ್‌ ಕಳೆದುಕೊಂಡ ಸಿಂಹಳೀಯರು 10 ರನ್‌ ಗಳಿಸಿದರು. ನಿಶಾನ್‌ ಡಿಕ್ವೆಲ್ಲಾ 8(5), ಸುಧೀರ ಸಮರ ವಿಕ್ರಮ 2(2) ರನ್‌ ಗಳಿಸಿದರು. ಭಾನುಕ ರಾಜಪಕ್ಷೆ ಯಾವುದೇ ರನ್‌ ಗಳಿಸಲಿಲ್ಲ.

ಪಂದ್ಯ ಆರಂಭ: ಜೂನ್‌ 14ರಂದು ಬೆಳಿಗ್ಗೆ 9ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.