ADVERTISEMENT

WI vs IND | ರೋಹಿತ್, ದಿನೇಶ್ ಬಿರುಸಿನ ಬ್ಯಾಟಿಂಗ್; ವಿಂಡೀಸ್‌ಗೆ 191 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2022, 16:29 IST
Last Updated 29 ಜುಲೈ 2022, 16:29 IST
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: @BCCI)
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: @BCCI)   

ತರೋಬಾ, ಪೋರ್ಟ್ ಆಫ್‌ ಸ್ಪೇನ್: ನಾಯಕ ರೋಹಿತ್‌ ಶರ್ಮಾ ಗಳಿಸಿದ ಆಕರ್ಷಕ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಬಿರುಸಿನ ಬ್ಯಾಟಿಂಗ್‌ನೆರವಿನಿಂದ ಭಾರತ ತಂಡವು ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿವೆಸ್ಟ್‌ ಇಂಡೀಸ್‌ಗೆ 191 ರನ್‌ಗಳ ಗುರಿ ನೀಡಿದೆ.

ಇಲ್ಲಿರುವ ಬ್ರಯಾನ್‌ ಲಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌ ಬೌಲಿಂಗ್‌ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್‌ ಹಾಗೂ ಸೂರ್ಯಕುಮಾರ್ ಯಾದವ್‌ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಕೇವಲ 4.4 ಓವರ್‌ಗಳಲ್ಲೇ 44 ರನ್‌ ಕಲೆಹಾಕಿದರು.

24 ರನ್ ಗಳಿಸಿದ್ದ ಸೂರ್ಯ ವಿಕೆಟ್‌ ಪತನದ ಬಳಿಕ ಬಂದ ಶ್ರೇಯಸ್‌ ಅಯ್ಯರ್‌ (0), ರಿಷಭ್‌ ಪಂತ್‌ (14), ಹಾರ್ದಿಕ್‌ ಪಾಂಡ್ಯ (1) ಹಾಗೂ ರವೀಂದ್ರ ಜಡೇಜ (16) ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.ಆದರೆ, ನಾಯಕನ ಆಟವಾಡಿದ ರೋಹಿತ್‌ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 64 ರನ್‌ ಬಾರಿಸಿದರು.

ADVERTISEMENT

ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಹಾಗೂ ರವಿಚಂದ್ರನ್‌ ಅಶ್ಚಿನ್‌ ಬೀಸಾಟವಾಡಿದ್ದರಿಂದ ತಂಡದ ಮೊತ್ತನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190ಕ್ಕೆ ತಲುಪಿತು.ಇವರಿಬ್ಬರು 7ನೇ ವಿಕೆಟ್‌ಗೆ 24 ಎಸೆತಗಳಲ್ಲಿ 52 ರನ್‌ ಕಲೆಹಾಕಿದರು. ದಿನೇಶ್‌ 19 ಎಸೆತಗಳಲ್ಲಿ 41 ರನ್‌ ಬಾರಿಸಿದರೆ, ಅವರಿಗೆಅಶ್ವಿನ್‌ (13 ರನ್) ಉತ್ತಮ ಬೆಂಬಲ ನೀಡಿದರು.

ವಿಂಡೀಸ್‌ ಪರ ಅಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರೆ, ಒಬೆಡ್ ಮೆಕಾಯ್‌, ಜೇಸನ್‌ ಹೋಲ್ಡರ್‌, ಅಕೀಲ್‌ ಹೊಸೈನ್‌, ಕೀಮೋ ಪೌಲ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.