ADVERTISEMENT

IND vs WI T20I: ಸರಣಿ ಜಯದ ಮೇಲೆ ಭಾರತ ಕಣ್ಣು

ಪಿಟಿಐ
Published 6 ಆಗಸ್ಟ್ 2022, 2:35 IST
Last Updated 6 ಆಗಸ್ಟ್ 2022, 2:35 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಫೋರ್ಟ್ ಲಾಡೆರ್‌ಹಿಲ್, ಫ್ಲಾರಿಡಾ: ಇದೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರಿಗೆ, ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳು ಪರೀಕ್ಷಾಕಣಗಳಾಗಿವೆ.

ಯುವ ಆಟಗಾರ ದೀಪಕ್ ಹೂಡಾ ಮತ್ತು ಶ್ರೇಯಸ್ ಅಯ್ಯರ್ ಅವರು ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಲು ಈ ಎರಡೂ ಪಂದ್ಯಗಳಲ್ಲಿ ಒಂದಿಷ್ಟು ರನ್‌ಗಳನ್ನು ಹರಿಸುವ ಸವಾಲು ಎದುರಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಎರಡೂ ಪಂದ್ಯಗಳು ಫ್ಲಾರಿಡಾದಲ್ಲಿ ನಡೆಯಲಿವೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2–1ರಿಂದ ಮುಂದಿದೆ. ಇನ್ನೊಂದು ಪಂದ್ಯ ಗೆದ್ದರೆ ಸರಣಿ ಕೈವಶವಾಗುವುದು ಖಚಿತ. ಆದರೆ ಆತಿಥೇಯ ತಂಡವು ತನ್ನ ಸರಣಿ ಜಯದ ಕನಸು ಜೀವಂತವಾಗುಳಿಸಿಕೊಳ್ಳಲು ಶನಿವಾರದ ಪಂದ್ಯ ಜಯಿಸಲೇಬೇಕಿದೆ. ಇದರಿಂದಾಗಿ ಎರಡೂ ತಂಡಗಳು ತುರುಸಿನ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ವಾರಾಂತ್ಯದಲ್ಲಿ ಅಮೆರಿಕದ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ಸಿಗುವ ಸಾಧ್ಯತೆ ಇದೆ.

ADVERTISEMENT

ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್‌. ರಾಹುಲ್ ಅವರು ತಂಡಕ್ಕೆ ಮರಳುವುದು ಖಚಿತವಾಗಿದೆ. ಆದ್ದರಿಂದ ಯುವ ಆಟಗಾರರಿಗೆ ಆಯ್ಕೆದಾರರ ಗಮನ ಸೆಳೆಯಲು ಈ ಎರಡೂ ಪಂದ್ಯಗಳು ಮುಖ್ಯವಾಗಿವೆ.

ಶ್ರೇಯಸ್ ಕಳೆದ ಮೂರು ಪಂದ್ಯಗಳಲ್ಲಿ (0, 10 ಹಾಗೂ 24) ವೈಫಲ್ಯ ಅನುಭವಿಸಿದ್ದಾರೆ. ವೇಗದ ಮತ್ತು ಪುಟಿದು ಬರುವ ಎಸೆತಗಳನ್ನು ಆಡುವಲ್ಲಿ ಎಡವಿದ್ದಾರೆ. ಕಳೆದ ಎರಡೂವರೆ ತಿಂಗಳುಗಳಲ್ಲಿ ಅವರಿಗೆ ಒಂಬತ್ತು ಟಿ20 ಪಂದ್ಯಗಳಲ್ಲಿಆಡಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ ಒಂದು ಬೆಂಗಳೂರಿನಲ್ಲಿ ಮಳೆಗೆ ಆಹುತಿ ಯಾಗಿತ್ತು. ಆದರೆ ಉಳಿದ ಪಂದ್ಯಗಳ ಪೈಕಿ ಒಂದು ಅರ್ಧಶತಕ ಮಾತ್ರ ಗಳಿಸಿ ದ್ದಾರೆ.ಈ ನಡುವೆ ಮಿಂಚಿರುವ ಸೂರ್ಯ ಕುಮಾರ್ ಯಾದವ್ ತಮ್ಮ ಸ್ಥಾನವನ್ನು ಬಹುತೇಕ ಭದ್ರಗೊಳಿಸಿಕೊಂಡಿದ್ದಾರೆ. ದೀಪಕ್ ಹೂಡಾ ಅವರನ್ನು ಪ್ರಯೋಗಕ್ಕೆ ಒಡ್ಡುವತ್ತ ತಂಡದ ಮ್ಯಾನೇಜ್‌ಮೆಂಟ್ ಚಿತ್ತ ಹರಿಸಬಹುದು. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದವರಲ್ಲಿ ಬಹುತೇಕರು ಸ್ಥಾನ ಪಡೆಯಬಹುದು.

ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ:ಡಿಡಿ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.