ADVERTISEMENT

ಭಾರತ–ವೆಸ್ಟ್‌ ಇಂಡೀಸ್‌: 5 ವಿಕೆಟ್‌ ಕಬಳಿಸಿ ಕೆರಿಬಿಯನ್ನರ ಕಟ್ಟಿ ಹಾಕಿದ ಇಶಾಂತ್‌

ಟೆಸ್ಟ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 2:06 IST
Last Updated 24 ಆಗಸ್ಟ್ 2019, 2:06 IST
   

ನಾರ್ತ್‌ ಸೌಂಡ್‌, ಆ್ಯಂಟಿಗ: ಸರ್‌ ವಿವಿಯನ್‌ ರಿಚರ್ಡ್ಸ್‌ ಮೈದಾನದಲ್ಲಿ ಶುಕ್ರವಾರ ಇಶಾಂತ್‌ ಶರ್ಮಾ ಬೌಲಿಂಗ್‌ ದಾಳಿಗೆ ಕೆರಿಬಿಯನ್‌ ಬ್ಯಾಟಿಂಗ್‌ ಪಡೆ ಪರದಾಡಿತು. ಐದು ವಿಕೆಟ್‌ ಕಬಳಿಸುವ ಮೂಲಕ ಇಶಾಂತ್‌ ಮಿಂಚಿದರು.

ಮೊದಲ ಟೆಸ್ಟ್‌ನ ಎರಡನೇ ದಿನದ ಆಟದಲ್ಲಿ ರವೀಂದ್ರ ಜಡೇಜ(58) ನೆರವಿನಿಂದ ಭಾರತ ತಂಡ 297 ರನ್‌ ಕರೆಹಾಕಿತು. ಮೊದಲ ಇನಿಂಗ್ಸ್ ಪ್ರಾರಂಭಿಸಿದ ಜೇಸನ್‌ ಹೋಲ್ಡರ್‌ ಪಡೆ 88 ರನ್‌ ಪೂರೈಸುವಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್‌ ಚೇಸ್‌(48), ಶಾಯ್‌ ಹೋಪ್‌(24) ಹಾಗೂ ಶಿಮ್ರನ್‌ ಹೆಟ್ಮೆಯರ್‌(35) ತಂಡಕ್ಕೆ ಆಸರೆಯಾಗುವ ಪ್ರಯತ್ನ ನಡೆಸಿದರು. ಆದರೆ, ವೇಗಿ ಇಶಾಂತ್‌ ಶರ್ಮಾ ಅವರ ಎಸೆತಗಳ ಎದುರು ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 13 ಓವರ್‌ ಬೌಲಿಂಗ್‌ ಮಾಡಿದ ಇಶಾಂತ್‌ 42 ರನ್‌ ನೀಡಿ 5 ವಿಕೆಟ್‌ ಪಡೆದರು.

ದಿನದ ಅಂತ್ಯಕ್ಕೆ ವೆಸ್ಟ್‌ ಇಂಡೀಸ್‌ 8 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿದೆ. ಕೆರಿಬಿಯನ್ನರು 108 ರನ್‌ ಹಿನ್ನಡೆಯಲಿದ್ದಾರೆ. ಇಶಾಂತ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂಬತ್ತನೇ ಬಾರಿಗೆ ಐದು ವಿಕೆಟ್‌ ಗುಚ್ಛ ಸಾಧನೆ ಮಾಡಿದ್ದಾರೆ. ಮೂರನೇ ದಿನದಲ್ಲಿ ಭಾರತ ಮತ್ತೆ ಬ್ಯಾಟಿಂಗ್‌ ನಡೆಸುವ ಸಾಧ್ಯತೆ ಹೆಚ್ಚಿದೆ.

6 ವಿಕೆಟ್‌ಗೆ 203ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಕೊಹ್ಲಿ ಬಳಗ 96.4 ಓವರ್‌ಗಳಲ್ಲಿ 297ರನ್‌ ಪೇರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.