ADVERTISEMENT

ಟೆಸ್ಟ್‌ ಕ್ರಿಕೆಟ್‌ ಪಂದ್ಯ: ಆತಿಥೇಯರಲ್ಲಿ ನಡುಕ ಹುಟ್ಟಿಸಿದ ನದೀಮ್‌

ಅಲ್ಪ ಮೊತ್ತಕ್ಕೆ ಕುಸಿದ ವೆಸ್ಟ್‌ ಇಂಡೀಸ್‌ ’ಎ’

ಪಿಟಿಐ
Published 25 ಜುಲೈ 2019, 19:31 IST
Last Updated 25 ಜುಲೈ 2019, 19:31 IST
ಶಹಬಾಜ್‌ ನದೀಮ್‌
ಶಹಬಾಜ್‌ ನದೀಮ್‌   

ನಾರ್ತ್‌ ಸೌಂಡ್‌, ಆ್ಯಂಟಿಗಾ: ಎಡಗೈ ಸ್ಪಿನ್ನರ್‌ ಶಹಬಾಜ್‌ ನದೀಮ್‌, ಬುಧವಾರ ರಾತ್ರಿ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ‘ಎ’ ತಂಡಕ್ಕೆ ಸಿಂಹಸ್ವ‍‍ಪ್ನರಾದರು.

ನದೀಮ್‌ (62ಕ್ಕೆ5) ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ‘ಎ’ ತಂಡ ನಾಲ್ಕು ದಿನಗಳ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ‘ಎ’ ಮೊದಲ ಇನಿಂಗ್ಸ್‌ನಲ್ಲಿ 66.5 ಓವರ್‌ಗಳಲ್ಲಿ 228ರನ್‌ ಕಲೆಹಾಕಿತು. ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಹನುಮ ವಿಹಾರಿ ಸಾರಥ್ಯದ ಭಾರತ ‘ಎ’ ಮೊದಲ ದಿನದಾಟದ ಅಂತ್ಯಕ್ಕೆ 22 ಓವರ್‌ಗಳಲ್ಲಿ 1 ವಿಕೆಟ್‌ಗೆ 70ರನ್‌ ಗಳಿಸಿದೆ.

ADVERTISEMENT

ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌ ‘ಎ’ ಐದನೇ ಓವರ್‌ನಲ್ಲಿ ಆಘಾತ ಕಂಡಿತು. ಮೊಹಮ್ಮದ್‌ ಸಿರಾಜ್‌ ಹಾಕಿದ ನಾಲ್ಕನೇ ಎಸೆತದಲ್ಲಿ ಜೆರೆಮಿ ಸೊಲೊಜಾನೊ (9), ಅಭಿಮನ್ಯು ಈಶ್ವರನ್‌ಗೆ ಕ್ಯಾಚ್‌ ನೀಡಿದರು.

ಶಮರ್ಹ ಬ್ರೂಕ್ಸ್‌ (12) ಮತ್ತು ಮೊಂಟ್ಸಿನ್‌ ಹಾಡ್ಜ್‌ (16) ಕೂಡಾ ಬೇಗನೆ ವಿಕೆಟ್‌ ಒಪ್ಪಿಸಿದರು. ರಾಸ್ಟನ್‌ ಚೇಸ್‌ (25) ಮತ್ತು ಜರ್ಮೈನ್‌ ಬ್ಲಾಕ್‌ವುಡ್‌ (53; 116ಎ, 6ಬೌಂ) ಕೆಲ ಕಾಲ ಪ್ರವಾಸಿ ಪಡೆಯ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ರಹಕೀಮ್‌ ಕಾರ್ನ್‌ವಾಲ್‌ (59; 100ಎ, 7ಬೌಂ, 3ಸಿ) ಕೂಡಾ ದಿಟ್ಟ ಆಟ ಆಡಿದರು.

ವಿಕೆಟ್‌ ಕೀಪರ್‌ ಜಹಮರ್‌ ಹ್ಯಾಮಿಲ್ಟನ್‌ (16) ಸೇರಿದಂತೆ ಇತರ ಆಟಗಾರರು ವಿಕೆಟ್‌ ನೀಡಲು ಅವಸರಿಸಿದ್ದರಿಂದ ಆತಿಥೇಯರ ದೊಡ್ಡ ಮೊತ್ತ ಪೇರಿಸುವ ಕನಸು ಸಾಕಾರಗೊಳ್ಳಲಿಲ್ಲ.

ಮೊದಲ ಇನಿಂಗ್ಸ್‌ ಶುರು ಮಾಡಿರುವ ಭಾರತ ‘ಎ’ ತಂಡಕ್ಕೆ ಪ್ರಿಯಾಂಕ್‌ ಪಾಂಚಾಲ್‌ (ಬ್ಯಾಟಿಂಗ್‌ 31; 69ಎ, 2ಬೌಂ) ಮತ್ತು ಅಭಿಮನ್ಯು ಈಶ್ವರನ್‌ (28; 52ಎ, 4ಬೌಂ) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 61ರನ್‌ ಸೇರಿಸಿತು.

ದಿನದಾಟ ಮುಗಿಯಲು ನಾಲ್ಕು ಓವರ್‌ಗಳು ಬಾಕಿ ಇದ್ದಾಗ ಈಶ್ವರನ್‌ ಪೆವಿಲಿಯನ್‌ ಸೇರಿದರು. ನಂತರ ಪಾಂಚಾಲ್‌ ಮತ್ತು ಶುಭಮನ್‌ ಗಿಲ್‌ (ಬ್ಯಾಟಿಂಗ್‌ 9) ಎಚ್ಚರಿಕೆಯಿಂದ ಇನಿಂಗ್ಸ್‌ ಕಟ್ಟಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ ‘ಎ’: ಮೊದಲ ಇನಿಂಗ್ಸ್‌; 66.5 ಓವರ್‌ಗಳಲ್ಲಿ 228 (ಮೊಂಟ್ಸಿನ್‌ ಹಾಡ್ಜ್‌ 16, ಶಮರ್ಹ ಬ್ರೂಕ್ಸ್‌ 12, ರಾಸ್ಟನ್‌ ಚೇಸ್‌ 25, ಜರ್ಮೈನ್‌ ಬ್ಲಾಕ್‌ವುಡ್‌ 53, ಜಹಮರ್‌ ಹ್ಯಾಮಿಲ್ಟನ್‌ 16, ರಹಕೀಮ್‌ ಕಾರ್ನ್‌ವಾಲ್‌ 59, ಜೊಮೆಲ್‌ ವಾರಿಕನ್‌ ಔಟಾಗದೆ 21; ಮೊಹಮ್ಮದ್‌ ಸಿರಾಜ್‌ 61ಕ್ಕೆ2, ಶಿವಂ ದುಬೆ 27ಕ್ಕೆ1, ಶಹಬಾಜ್‌ ನದೀಮ್‌ 62ಕ್ಕೆ5, ಮಯಂಕ್‌ ಮಾರ್ಕಂಡೆ 40ಕ್ಕೆ2).

ಭಾರತ ‘ಎ’: ಪ್ರಥಮ ಇನಿಂಗ್ಸ್‌: 22 ಓವರ್‌ಗಳಲ್ಲಿ 1 ವಿಕೆಟ್‌ಗೆ 70 (ಪ್ರಿಯಾಂಕ್‌ ಪಾಂಚಾಲ್‌ ಬ್ಯಾಟಿಂಗ್‌ 31, ಅಭಿಮನ್ಯು ಈಶ್ವರನ್‌ 28, ಶುಭಮನ್‌ ಗಿಲ್‌ ಬ್ಯಾಟಿಂಗ್‌ 9; ಜೊಮೆಲ್‌ ವಾರಿಕನ್‌ 9ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.