
ಬ್ಯಾಂಕಾಕ್: ಸ್ಪಿನ್ನರ್‌ಗಳಾದ ತನುಜಾ ಕನ್ವರ್ (12ಕ್ಕೆ4) ಹಾಗೂ ಮಿನು ಮಣಿ (8ಕ್ಕೆ3) ಅವರ ಬೌಲಿಂಗ್ ದಾಳಿ ಎದುರು ನೇಪಾಳ ಮಹಿಳಾ ಎ ತಂಡವು 78 ರನ್‌ಗಳ ಅಲ್ಪಮೊತ್ತಕ್ಕೆ ಕುಸಿಯಿತು. ಕೇವಲ 7.5 ಓವರ್‌ಗಳಲ್ಲಿ ಗುರಿ ತಲುಪಿದ ಭಾರತ ಮಹಿಳಾ ಎ ತಂಡವು ರೈಸಿಂಗ್ ಸ್ಟಾರ್ಸ್ ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ಎ ತಂಡದ ನಾಯಕಿ ರಾಧಾ ಯಾದವ್ ಬೌಲಿಂಗ್ ಆಯ್ದುಕೊಂಡರು. ಎಡಗೈ ಸ್ಪಿನ್ನರ್ ತನುಜಾ ಹಾಗೂ ಬಲಗೈ ಸ್ಪಿನ್ನರ್ ಮಿನು ಕೈಚಳಕ ಮೆರೆದರು. ನೇಪಾಳದ ಆರಂಭ ಆಟಗಾರ್ತಿ ಸಂಝಾನಾ ಖಡ್ಕಾ (22; 16ಎ) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಬಂದ ವೇಗದಲ್ಲಿಯೇ ಪೆವಿಲಿಯನ್‌ಗೆ ಮರಳಿದರು. ನಾಯಕಿ ರಾಧಾ ಎರಡು ವಿಕೆಟ್ ಪಡೆದು ಎದುರಾಳಿ ತಂಡವು ಬೇಗನೆ ಕುಸಿಯುವಂತೆ ಮಾಡಿದರು. ನೇಪಾಳ ತಂಡವು 18 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಕನ್ನಡತಿ ವೃಂದಾ ದಿನೇಶ್ ಬ್ಯಾಟಿಂಗ್‌ನಲ್ಲಿ ಮತ್ತೆ ಮಿಂಚಿದರು. ಅವರು 18 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 39 ರನ್ ಗಳಿಸಿದರು. ಭಾರತ ಮಹಿಳಾ ಎ ತಂಡವು ಇನ್ನೂ 73 ಎಸೆತ ಉಳಿದಿರುವಂತೆಯೇ 3 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗುರಿ ತಲುಪಿತು.
ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಯುಎಇ ತಂಡವನ್ನು ಮಣಿಸಿದ ಪಾಕಿಸ್ತಾನ ತಂಡವೂ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ನೇಪಾಳ ಮಹಿಳಾ ಎ ತಂಡ: 18 ಓವರ್‌ಗಳಲ್ಲಿ 78 (ಸಂಝಾನಾ ಖಡ್ಕಾ 22, ಕವಿತಾ ಜೋಶಿ ಔಟಾಗದೇ 12; ತನುಜಾ ಕನ್ವರ್ 12ಕ್ಕೆ4, ಮಿನು ಮಣಿ 8ಕ್ಕೆ3, ರಾಧಾ ಯಾದವ್ 17ಕ್ಕೆ2). ಭಾರತ ಮಹಿಳಾ ಎ ತಂಡ: 7.5 ಓವರ್‌ಗಳಲ್ಲಿ 3 ವಿಕೆಟ್‌ಗೆ 82 (ದಿನೇಶ್ ವೃಂದಾ ಔಟಾಗದೇ 39, ತೇಜಲ್ ಹಸಬ್ನಿಸ್ 18; ಸೀತಾ ರಾಣಾ ಮಗರ್ 9ಕ್ಕೆ1). ಪಂದ್ಯದ ಆಟಗಾರ್ತಿ: ತನುಜಾ ಕನ್ವರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.