ಬರ್ಮಿಂಗ್‌ಹ್ಯಾಮ್: ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಸರಣಿಯನ್ನು ಜಯಿಸಿರುವ ಭಾರತದ ವನಿತೆಯರು ಭರ್ತಿ ಆತ್ಮವಿಶ್ವಾಸದಲ್ಲಿದ್ದಾರೆ.
ಶನಿವಾರ ನಡೆಯಲಿರುವ ಸರಣಿಯ ಕೊನೆಯ ಮತ್ತು ಐದನೇ ಪಂದ್ಯದಲ್ಲಿಯೂ ಗೆಲುವು ಸಾಧಿಸುವತ್ತ ಹರ್ಮನ್‌ಪ್ರೀತ್ ಕೌರ್ ಬಳಗವು ಚಿತ್ತ ನೆಟ್ಟಿದೆ.
ತಂಡದ ಆರಂಭಿಕ ಜೋಡಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ಉತ್ತಮ ಲಯದಲ್ಲಿದ್ದಾರೆ. ಜೆಮಿಮಾ ರಾಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ರನ್ ಗಳಿಸುತ್ತಿದ್ದಾರೆ.
ಮಧ್ಯಮವೇಗಿಯಾಗಿ ಪರಿಣಾಮಕಾರಿಯಾಗಿರುವ ಅರುಂಧತಿ ರೆಡ್ಡಿ ಫೀಲ್ಡಿಂಗ್‌ನಲ್ಲಿಯೂ ಮಿಂಚಿದ್ದರು. ಹೋದ ಪಂದ್ಯದಲ್ಲಿ ಮೂರು ಅಮೋಘ ಕ್ಯಾಚ್‌ಗಳನ್ನು ಪಡೆದಿದ್ದರು. ರಾಧಾ ಯಾದವ್ ಅವರೂ ಉತ್ತಮ ಬೌಲಿಂಗ್ ಮೂಲಕ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ್ದರು. ಅದರಿಂದಾಗಿ ಇಂಗ್ಲೆಂಡ್ ತಂಡವು 7ಕ್ಕೆ126 ರನ್ ಮಾತ್ರ ಗಳಿಸಿತ್ತು. ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು. ಅದರಿಂದಾಗಿ ಐದು ಪಂದ್ಯಗಳ ಸರಣಿಯಲ್ಲಿ 3–1ರ ಮುನ್ನಡೆ ಸಾಧಿಸಿತು.
ಈ ಪಂದ್ಯದ ನಂತರ ಭಾರತ ತಂಡವು ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿದೆ. ಭಾರತದ ಬೌಲಿಂಗ್ ದಾಳಿಯು ನಾಲ್ವರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳನ್ನು ಅವಲಂಬಿಸಿದೆ. ಇದುವರೆಗೂ ಇಂಗ್ಲೆಂಡ್ ಬ್ಯಾಟರ್‌ಗಳು ಭಾರತದ ಸ್ಪಿನ್ನರ್‌ಗಳ ಎದುರು ವೈಫಲ್ಯ ಅನುಭವಿಸಿದ್ದಾರೆ. ಸ್ಪಿನ್ ಬೌಲರ್‌ಗಳು ಒಟ್ಟು 22 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ.
ರಾಧಾ ಅವರೊಂದಿಗೆ ಶ್ರೀಚರಣಿ, ದೀಪ್ತಿ ಶರ್ಮಾ ಅವರೂ ಮಿಂಚುತ್ತಿರುವುದು ಭಾರತ ತಂಡದ ಬಲ ಹೆಚ್ಚಿಸಿದೆ.
ಆತಿಥೇಯ ಇಂಗ್ಲೆಂಡ್ ತಂಡವು ಕೊನೆಯ ಪಂದ್ಯದಲ್ಲಿ ಸಮಾಧಾನಕರ ಜಯ ಗಳಿಸುವ ನಿರೀಕ್ಷೆಯಲ್ಲಿದೆ. ತಂಡದ ವೇಗಿ ಲಾರೆನ್ ಬೆಲ್ ಈ ಸರಣಿಯಲ್ಲಿ ಆರು ವಿಕೆಟ್ ಗಳಿಸಿದ್ದಾರೆ. ಅವರ ಮುಂದೆ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ. ಡಂಕ್ಲಿ ಮತ್ತು ಡ್ಯಾನಿ ವೈಟ್ ಹಾಜ್, ಸೋಫಿ ಎಕ್ಲೆಸ್ಟೋನ್ ಮತ್ತು ಲಾರೆನ್ ಫೈಲರ್ ಅವರು ತಮ್ಮ ಲಯಕ್ಕೆ ಮರಳಿದರೆ ಭಾರತದ ಜಯದ ಹಾದಿ ತುಸು ಕಷ್ಟವಾಗಬಹುದು.
ಪಂದ್ಯ ಆರಂಭ: ರಾತ್ರಿ 11.05
ನೇರಪ್ರಸಾರ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.