ADVERTISEMENT

ಭಾರತ ವನಿತೆಯರಿಗೆ ವಿಶ್ವಕಪ್ ತಾಲೀಮು: ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ

ಪಿಟಿಐ
Published 13 ಸೆಪ್ಟೆಂಬರ್ 2025, 23:30 IST
Last Updated 13 ಸೆಪ್ಟೆಂಬರ್ 2025, 23:30 IST
   

ಮುಲ್ಲನಪುರ: ಮಹಿಳಾ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಂತೆ ಭಾರತ ತಂಡ ಅಂತಿಮ ತಾಲೀಮು ಆಗಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ.

ಹರ್ಮನ್‌ಪ್ರೀತ್ ಕೌರ್‌ ಪಡೆಗೆ, ತವರಿನಲ್ಲಿ ನಡೆಯುವ ವಿಶ್ವಕಪ್‌ಗೆ ಸಂಯೋಜನೆಗಳನ್ನು ಅಂತಿಮಗೊಳಿಸಲು ಈ ಸರಣಿ ನೆರವಾಗಲಿದೆ. ಅಷ್ಟೇ ಅಲ್ಲ, 2024ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಕೈಲಿ ಅನುಭವಿಸಿದ 0–3 ವೈಟ್‌ವಾಷ್‌ಗೆ ಸೇಡು ತೀರಿಸಲು ಸದವಕಾಶ.

ಆ ಹಿನ್ನಡೆಯ ನಂತರ ಭಾರತ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಐರ್ಲೆಂಡ್‌ ವಿರುದ್ಧ ತವರಿನಲ್ಲಿ 3–0 ಗೆಲುವು, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯಲ್ಲಿ ಜಯ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿ (3–2) ಮತ್ತು ಏಕದಿನ ಸರಣಿ (2–1) ಗೆಲುವು ತಂಡದಲ್ಲಿ ಉತ್ಸಾಹ ಮೂಡಿಸಿದೆ.

ADVERTISEMENT

ಗಾಯಾಳಾಗಿದ್ದ ವೇಗದ ಬೌಲರ್ ರೇಣುಕಾ ಸಿಂಗ್ ನವಮಾಸಗಳ ನಂತರ ತಂಡಕ್ಕೆ ಮರಳುತ್ತಿದ್ದು ಅವರ ನಿರ್ವಹಣೆ ಹೇಗಿರಲಿದೆ ಎಂಬ ಕುತೂಹಲವೂ ಇದೆ. ‘ರೇಣುಕಾ ನಮ್ಮ ಪಾಲಿಗೆ ಪ್ರಮುಖ ಆಟಗಾರ್ತಿ. ಈಗ ಅವರು ತಂಡಕ್ಕೆ ಲಭ್ಯರಿರುವುದು ನಮಗೆ ಸಂತಸದ ವಿಷಯ’ ಎಂದು ಮುಖ್ಯ ಆಯ್ಕೆಗಾರ್ತಿ ನೀತು ಡೇವಿಡ್ ತಿಳಿಸಿದರು.

ಆಸ್ಟ್ರೇಲಿಯಾ ಕಡೆ ವಿಕೆಟ್‌ ಕೀಪರ್ – ಬ್ಯಾಟರ್‌ ಬೆತ್ ಮೂನಿ ಅವರು ಭಾರತ ವಿರುದ್ಧ ಉತ್ತಮ ಆಟದ ದಾಖಲೆ ಹೊಂದಿದ್ದಾರೆ.

‘ಈ ಸರಣಿ ವಿಭಿನ್ನ ಸಂಯೋಜನೆಗಳನ್ನು ಪರೀಕ್ಷಿಸಲು ಒಳ್ಳೆಯ ಅವಕಾಶ. ನಮ್ಮಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿದ್ದಾರೆ’ ಎಂದು ಉಪನಾಯಕಿ ತಹಿಲಾ ಮೆಕ್‌ಗ್ರಾತ್ ತಿಳಿಸಿದರು.

ಮೊದಲ ಎರಡು ಪಂದ್ಯಗಳು ಮುಲ್ಲನಪುರದಲ್ಲಿ ನಡೆಯಲಿದೆ. ಮೂರನೇ ಪಂದ್ಯ ಸೆ. 20ರಂದು ನವದೆಹಲಿಯಲ್ಲಿ ನಿಗದಿಯಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.