ADVERTISEMENT

ಟಿ–20 ಕ್ರಿಕೆಟ್ | ವಿಂಡೀಸ್ ಎದುರು 3–0 ಮುನ್ನಡೆ: ವೈಟ್‌ವಾಷ್ ಸಾಧನೆಯತ್ತ ಭಾರತ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 17:33 IST
Last Updated 15 ನವೆಂಬರ್ 2019, 17:33 IST
   

ಪ್ರಾವಿಡೆನ್ಸ್‌ (ಗಯಾನಾ): ಸ್ಪಿನ್ನರ್‌ಗಳ ಕೈಚಳಕಕ್ಕೆ ವೆಸ್ಟ್ ಇಂಡೀಸ್‌ ಬ್ಯಾಟ್ಸ್‌ವುಮೆನ್‌ ತತ್ತರಿಸಿದರು. ಜೆಮಿಮಾ ರಾಡ್ರಿಗಸ್‌ ಬ್ಯಾಟಿಂಗ್‌ನಲ್ಲಿ (ಅಜೇಯ 40) ಮಿಂಚಿದರು. ಭಾರತ ಮಹಿಳಾ ತಂಡ ಕೆರಿಬಿಯನ್‌ ಪಡೆಯ ಎದುರು ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಗಳಿಸಿ ಸರಣಿ ಜಯಿಸಿತು.

ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 9 ವಿಕೆಟ್‌ ಕಳೆದುಕೊಂಡು 59 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್‌ಗಳಾದ ರಾಧಾ ಯಾದವ್‌ (6ಕ್ಕೆ 2), ದೀಪ್ತಿ ಶರ್ಮಾ (12ಕ್ಕೆ 2), ಪೂನಂ ಯಾದವ್‌ (13ಕ್ಕೆ 1) ಹಾಗೂ ಅನುಜಾ ಪಾಟೀಲ್‌ (13ಕ್ಕೆ 1) ಆತಿಥೇಯರನ್ನು ಕಾಡಿದರು. ಚಿನೆಲೆ ಹೆನ್ರಿ ಹಾಗೂ ಚೆಡೀನ್‌ ನೇಷನ್‌ ತಲಾ 11 ರನ್‌ ಗಳಿಸಿದ್ದೇ ವಿಂಡೀಸ್‌ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್‌ಗಳು.

ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಪ್ರವಾಸಿ ಪಡೆಯು 13 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆತಂಕದಲ್ಲಿತ್ತು. ಆದರೆ ಜೆಮಿಮಾ ತಂಡಕ್ಕೆ ಆಪತ್ಬಾಂಧವರಾದರು. 51 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಗಳಿಸಿದರು. 20 ಎಸೆತಗಳು ಬಾಕಿ ಇರುವಂತೆಯೇ ತಂಡ ಮೂರು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ವಿಂಡೀಸ್‌ ಪರ ಹೇಲಿ ಮ್ಯಾಥ್ಯೂಸ್‌ ಎರಡು ವಿಕೆಟ್‌ ಕಿತ್ತರು.

ADVERTISEMENT

ಸರಣಿಯ ಮುಂದಿನ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌: 20 ಓವರುಗಳಲ್ಲಿ 9 ವಿಕೆಟ್‌ಗೆ 59 (ಚಿನೆಲೆ ಹೆನ್ರಿ 11; ರಾಧಾ ಯಾದವ್‌ 6ಕ್ಕೆ2, ದೀಪ್ತಿ ಶರ್ಮಾ 12ಕ್ಕೆ2); ಭಾರತ: 16.4 ಓವರುಗಳಲ್ಲಿ 3 ವಿಕೆಟ್‌ಗೆ 60 (ಜೆಮಿಮಾ ರಾಡ್ರಿಗಸ್‌ ಔಟಾಗದೇ 40; ಹೇಲಿ ಮ್ಯಾಥ್ಯೂಸ್‌ 7ಕ್ಕೆ2). ಫಲಿತಾಂಶ: ಭಾರತಕ್ಕೆ ಏಳು ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.