
ತಿರುವನಂತಪುರ: ಶ್ರೀಲಂಕಾ ವಿರುದ್ಧದ ಮಹಿಳಾ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಭಾರತ ತಂಡವು 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.
10 ಸಾವಿರ ರನ್ ಗಡಿ ದಾಟಿದ ಸ್ಮೃತಿ ಮಂದಾನ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಡಿದಾಟಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ. ಅವರು ಕೇವಲ 280 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ 27 ರನ್ ಗಳಿಸಿದ್ದಾಗ, ಸ್ಮೃತಿ ಮಂದಾನ ಈ ಸಾಧನೆ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 157 ಟಿ–20 ಪಂದ್ಯಗಳಿಂದ 4,094 ರನ್, 117 ಏಕದಿನ ಪಂದ್ಯಗಳಲ್ಲಿ 5,322 ರನ್ ಹಾಗೂ 7 ಟೆಸ್ಟ್ ಪಂದ್ಯಗಳಿಂದ 629 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಕೂಡ ಸೇರಿವೆ.
ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳ ಜೊತೆಯಾಟ: ಭಾರತದ ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ಅವರು ಮೊದಲ ವಿಕೆಟ್‌ಗೆ 162 ರನ್‌ಗಳ ಜೊತೆಯಾಟ ಆಡಿದರು. ಇದು ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ರನ್‌ಗಳ ಜೊತೆಯಾಟವಾಗಿದೆ. ಈ ಹಿಂದೆ, ಇದೇ ಜೋಡಿಯು 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 143 ರನ್‌ಗಳ ಜೊತೆಯಾಟ ಆಡಿತ್ತು.
ಮಹಿಳಾ ಟಿ20ಯಲ್ಲಿ ಅತ್ಯಧಿಕ ಸಿಕ್ಸರ್: ಸ್ಮೃತಿ ಮಂದಾನ ಅವರು ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರು. ಈ ಮೂಲಕ ಮಹಿಳಾ ಟಿ20ಯಲ್ಲಿ ಭಾರತದ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ್ದ ಹರ್ಮನ್‌ಪ್ರೀತ್ ಕೌರ್ (78 ಸಿಕ್ಸರ್) ದಾಖಲೆಯನ್ನು ಮಂದಾನ ಮುರಿದರು. ಅವರು ಒಟ್ಟು 80 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 69 ಸಿಕ್ಸರ್ ಹೊಡೆದಿರುವ ಶಫಾಲಿ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.
ಮಹಿಳಾ ಟಿ20ಯಲ್ಲಿ ಅತಿದೊಡ್ಡ ಮೊತ್ತ: ಭಾರತವು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 221 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವು ಗಳಿಸಿದ ಅತಿದೊಡ್ಡ ಮೊತ್ತವಾಗಿದೆ. ಈ ಹಿಂದೆ 2024ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 217 ರನ್ ಗಳಿಸಿತ್ತು.
ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಸರಣಿಯನ್ನು ವಶಪಡಿಸಿಕೊಂಡಿದ್ದು, ವೈಟ್‌ವಾಶ್ ಮಾಡುವ ಗುರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.