ADVERTISEMENT

ಒಂದು ಪಂದ್ಯದಲ್ಲಿ ನಾಯಕತ್ವ ವಹಿಸುವುದು ಉತ್ತಮ ಸನ್ನಿವೇಶವಲ್ಲ: ರಿಷಭ್ ಪಂತ್

ಪಿಟಿಐ
Published 21 ನವೆಂಬರ್ 2025, 11:36 IST
Last Updated 21 ನವೆಂಬರ್ 2025, 11:36 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಪಿಟಿಐ)

ಗುವಾಹಟಿ: 'ಒಂದೇ ಒಂದು ಪಂದ್ಯದಲ್ಲಿ ಮಾತ್ರ ನಾಯಕತ್ವ ವಹಿಸುವುದು ಉತ್ತಮ ಸನ್ನಿವೇಶವಲ್ಲ' ಎಂದು ಭಾರತ ಟೆಸ್ಟ್ ತಂಡದ ಉಸ್ತುವಾರಿ ನಾಯಕ ರಿಷಭ್ ಪಂತ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಗುವಾಹಟಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಪಂತ್ ಮುನ್ನಡೆಸಲಿದ್ದಾರೆ. ಆ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ತಂಡದ 38ನೇ ನಾಯಕರೆನಿಸಲಿದ್ದಾರೆ.

ಕುತ್ತಿಗೆ ನೋವಿನಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿರುವ ಶುಭಮನ್ ಗಿಲ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಗುವಾಹಟಿ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಪಂತ್, 'ಒಂದೇ ಟೆಸ್ಟ್‌ನಲ್ಲಿ ನಾಯಕತ್ವ ವಹಿಸುವುದು ಅತ್ಯುತ್ತಮ ಸನ್ನಿವೇಶವಲ್ಲ. ಆದರೆ ಈ ಬಗ್ಗೆ ಅತಿಯಾಗಿ ಯೋಚಿಸಲು ಬಯಸುವುದಿಲ್ಲ. ಬಿಸಿಸಿಐ ಈ ಅವಕಾಶ ನೀಡಿದ್ದಕ್ಕಾಗಿ ಹೆಮ್ಮೆಪಟ್ಟುಕೊಳ್ಳುತ್ತೇನೆ. ದೇಶವನ್ನು ಮುನ್ನಡೆಸುವ ಅವಕಾಶ ಯಾವತ್ತೂ ಹೆಮ್ಮೆಯ ಕ್ಷಣ' ಎಂದು ಹೇಳಿದ್ದಾರೆ.

'ನಾಯಕತ್ವದ ಶೈಲಿಯ ಬಗ್ಗೆ ಕೇಳಿದಾಗ ಹಳೆ ಹಾಗೂ ಹೊಸತನದ ಮಿಶ್ರಣವಾಗಿರಲಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ಜೊತೆಗೆ 'ಔಟ್ ಆಫ್ ಬಾಕ್ಸ್' ಚಿಂತನೆಯು ನೆರವಾಗಲಿದೆ. ಆದ್ದರಿಂದ ಇವರೆಡರ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವೆನಿಸುತ್ತದೆ' ಎಂದು ಹೇಳಿದ್ದಾರೆ.

'ಮುಕ್ತವಾಗಿ ಆಡಲು ಆಟಗಾರರಿಗೆ ಅವಕಾಶ ನೀಡುವುದು ನನ್ನ ಮೊದಲ ಆದ್ಯತೆ. ಓರ್ವ ಆಟಗಾರನಾಗಿ ನಾನು ಕೂಡ ಅದನ್ನೇ ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ.

'ಶೇ 100ರಷ್ಟು ಸಮರ್ಪಣಾ ಮನೋಭಾವದಿಂದ ಆಡಲಿದ್ದೇನೆ. ಪಂದ್ಯದಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಬಯಸುತ್ತೇನೆ' ಎಂದಿದ್ದಾರೆ.

ಗಿಲ್ ಜೊತೆ ಮಾತನಾಡಿದ್ದೀರಾ ಎಂದು ಕೇಳಿದಾಗ, 'ನಾನು ಯಾವತ್ತೂ ಗಿಲ್ ಜೊತೆ ಮಾತನಾಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಎರಡು ಪಂದ್ಯಗಳ ಕಿರು ಸರಣಿಯಲ್ಲಿ ಪುಟಿದೇಳುವುದು ಕಷ್ಟಕರ ಎಂದು ಪಂತ್ ಒಪ್ಪಿಕೊಂಡಿದ್ದಾರೆ. ಆದರೂ ಅಂತಿಮ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.

ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ, ಸರಣಿ ಸಮಬಲಗೊಳಿಸಲು ಈ ಪಂದ್ಯದಲ್ಲೇ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.