ADVERTISEMENT

ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

ಪಿಟಿಐ
Published 13 ನವೆಂಬರ್ 2025, 7:36 IST
Last Updated 13 ನವೆಂಬರ್ 2025, 7:36 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಪಿಟಿಐ ಚಿತ್ರ)

ಕೋಲ್ಕತ್ತ: 'ಗಾಯದ ಬಳಿಕ ತಂಡಕ್ಕೆ ಪುನರಾಗಮನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ' ಎಂದು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಹೇಳಿದ್ದಾರೆ.

ADVERTISEMENT

ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಕ್ಕೊಳಗಾಗಿದ್ದ ಪಂತ್, ನಾಲ್ಕು ತಿಂಗಳ ಸುದೀರ್ಘ ವಿಶ್ರಾಂತಿಯ ಬಳಿಕ ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧ ನಡೆದ ಸರಣಿಯಲ್ಲಿ ಭಾರತ 'ಎ' ತಂಡವನ್ನು ಮುನ್ನಡೆಸಿದ್ದ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

'ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮತ್ತೆ ಮರಳುತ್ತಿರುವುದು ಖುಷಿ ತಂದಿದೆ. ಏಕೆಂದರೆ ಗಾಯದ ಬಳಿಕ ತಂಡಕ್ಕೆ ಮರಳುವುದು ಸುಲಭವಲ್ಲ. ದೇವರು ನನ್ನಲ್ಲಿ ದಯೆ ತೋರಿದ್ದಾನೆ. ದೇವರ ಆಶೀರ್ವಾದ ಸದಾ ಇದೆ' ಎಂದು ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

'ಅದಕ್ಕಾಗಿಯೇ ಪ್ರತಿ ಸಲವೂ ಮೈದಾನಕ್ಕಿಳಿದಾಗ ಆಕಾಶಕ್ಕೆ ನೋಡಿ ದೇವರಿಗೆ, ನನ್ನ ಕುಟುಂಬದವರಿಗೆ, ಎಲ್ಲರಿಗೂ ಧನ್ಯವಾದ ವ್ಯಕ್ತಪಡಿಸುತ್ತೇನೆ. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ' ಎಂದು ಭೀಕರ ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿದ್ದ ಪಂತ್ ನುಡಿದಿದ್ದಾರೆ.

'ಭವಿಷ್ಯದ ಬಗ್ಗೆ ಅನಗತ್ಯ ಚಿಂತೆಗೆ ಈಡಾಗುವ ಬದಲು ಪುನಶ್ಚೇತನದ ಸಮಯದಲ್ಲಿ ಉತ್ತಮ ಮನಸ್ಥಿತಿಯಲ್ಲಿರಲು ಪ್ರಯತ್ನಿಸಿದ್ದೇನೆ. ನನ್ನಿಂದ ನಿಯಂತ್ರಿಸಲು ಸಾಧ್ಯವಾದ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೆ' ಎಂದು ಪಂತ್ ವಿವರಿಸಿದ್ದಾರೆ.

'ಕಠಿಣ ಪರಿಸ್ಥಿತಿಯಿಂದ ತುಂಬಾ ಪಾಠ ಕಲಿಯಲು ಸಾಧ್ಯ. ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತೇನೆ. ಮೈದಾನದಲ್ಲಿ ಶೇ 100ರಷ್ಟು ಅರ್ಪಣಾ ಮನೋಭಾವದಿಂದ ಆಡಲು ಯತ್ನಿಸುತ್ತೇನೆ' ಎಂದು 28 ವರ್ಷದ ಪಂತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.