ADVERTISEMENT

ಟ್ವೆಂಟಿ–20 ವಿಶ್ವಕಪ್: ಪಾಕ್‌ನಲ್ಲಿ ಸಂಭ್ರಮ; ಭಾರತಕ್ಕೆ ‘ಆನ್‌ಲೈನ್‌’ ದಾಳಿ

ಕೊಹ್ಲಿ ಬಳಗದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಟೀಕೆಗಳ ಮಳೆ; ಹಲವರಿಂದ ಬೌಲರ್‌ಗೆ ಬೆಂಬಲ

ಏಜೆನ್ಸೀಸ್
Published 25 ಅಕ್ಟೋಬರ್ 2021, 13:20 IST
Last Updated 25 ಅಕ್ಟೋಬರ್ 2021, 13:20 IST
ಪಂದ್ಯದ ನಂತರ ಪಾಕಿಸ್ತಾನ ಆಟಗಾರರು ಸೆಲ್ಫಿ ತೆಗೆದು ಸಂಭ್ರಮಿಸಿದರು –ಟ್ವಿಟರ್ ಚಿತ್ರ
ಪಂದ್ಯದ ನಂತರ ಪಾಕಿಸ್ತಾನ ಆಟಗಾರರು ಸೆಲ್ಫಿ ತೆಗೆದು ಸಂಭ್ರಮಿಸಿದರು –ಟ್ವಿಟರ್ ಚಿತ್ರ   

ನವದೆಹಲಿ/ದುಬೈ/ಶಾರ್ಜಾ: ಭಾರತವನ್ನು ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಬಾಬರ್ ಆಜಂ ಬಳಗ ಮಣಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾನುವಾರ ರಾತ್ರಿ ಆರಂಭಗೊಂಡಿದ್ದ ಸಂಭ್ರಮ ಸೋಮವಾರವೂ ಮುಂದುವರಿದಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಭಾರತದಲ್ಲಿ ಆನ್‌ಲೈನ್ ದಾಳಿ ನಡೆದಿದೆ. ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ನಿಂದಿಸಲಾಗಿದೆ.

ಭಾನುವಾರ ರಾತ್ರಿ ನಡೆದ ಸೂಪರ್ 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಇದು, ವಿಶ್ವಕಪ್‌ ಒಂದರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಜಯವಾಗಿತ್ತು. 29 ವರ್ಷಗಳಲ್ಲಿ 12 ಬಾರಿ ಮುಖಾಮುಖಿಯಾದಾಗಲೂ ಗೆಲುವು ಭಾರತದ್ದಾಗಿತ್ತು.

ಈ ಜಯದೊಂದಿಗೆ ತಂಡವು ವಿಶ್ವಕಪ್‌ ಅನ್ನೇ ಗೆದ್ದಿದೆ ಎಂಬ ಪ್ರತೀತಿ ಪಾಕಿಸ್ತಾನದ ಅಭಿಮಾನಿಗಳಲ್ಲಿ ಉಂಟಾಗಿದೆ. ಐತಿಹಾಸಿಕ ಗೆಲುವು ತಂದುಕೊಟ್ಟ ನಾಯಕ ಬಾಬರ್ ಆಜಂ, ಭಾರತದ ಬ್ಯಾಟರ್‌ಗಳನ್ನು ಕಂಗೆಡಿಸಿದ ವೇಗಿ ಶಾಹೀನ್ ಶಾ ಅಫ್ರಿದಿ ಮತ್ತು ದಿಟ್ಟ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್ ರಿಜ್ವಾನ್ ಅಹಮ್ಮದ್ ಬಗ್ಗೆ ಪಾಕಿಸ್ತಾನದಲ್ಲಿ ಅಭಿಮಾನದ ಹೊಳೆ ಹರಿದಿದೆ.

ADVERTISEMENT

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಅವರು ಭಾರತಕ್ಕೆ ನಿರೀಕ್ಷೆಗೆ ತಕ್ಕ ಆಟ ಆಡಲು ಆಗಲಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೂ ಬದ್ಧ ರಾಜಕೀಯ ವೈರಿ ಪಾಕಿಸ್ತಾನದ ಕ್ರಿಕೆಟ್‌ ತಂಡದ ವಿರುದ್ಧ ಮೊದಲ ಸೋಲಿಗೆ ಮೊಹಮ್ಮದ್ ಶಮಿ ಅವರೇ ಪ್ರಮುಖ ಕಾರಣ ಎಂದು ಕೆಲವರು ಕಿಡಿಕಾರಿದ್ದಾರೆ. ಅವರ ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶಗಳು ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದು ಕೆಲವರು ‘ಮೋಸಗಾರ’ ಎಂದು ದೂರಿದ್ದಾರೆ.

ಇದೇ ವೇಳೆ ಮೊಹಮ್ಮದ್ ಶಮಿ ಪರವಾಗಿಯೂ ಅನೇಕರು ಮಾತನಾಡಿದ್ದಾರೆ. ತಂಡದ ಸೋಲಿಗೆ ಅವರನ್ನು ದೂರುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಮಿ ಅವರಿಗೆ ಬೆಂಬಲ ನೀಡಲು ನಾಗರಿಕ ಸಮಾಜ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಕಪ್ಪುವರ್ಣೀಯರ ಬಗ್ಗೆ ಕಾಳಜಿ ವಹಿಸಿ ಪಂದ್ಯದ ಆರಂಭಕ್ಕೂ ಮೊದಲು ಮೊಣಕಾಲೂರಿದ ಆಟಗಾರರು ತಂಡದ ಸದಸ್ಯನೊಬ್ಬನ ಬಗ್ಗೆ ಠೀಕೆಗಳು ಬಂದಾಗ ಎದ್ದು ನಿಲ್ಲಲು ಸಾಧ್ಯವಿಲ್ಲವೇ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಪಟಾಕಿ ಸಿಡಿಸಿ, ಗುಂಡು ಹಾರಿಸಿ ಸಂಭ್ರಮ

ಪಾಕಿಸ್ತಾನದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಕೆಲವು ಕಡೆಗಳಲ್ಲಿ ಗುಂಡು ಹಾರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಸೇರಿದಂತೆ ಭಾರತದಲ್ಲೂ ಕೆಲವು ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಲೋಕಸಭಾ ಸದಸ್ಯ ಬಿಜೆಪಿಯ ಗೌತಮ್ ಗಂಭೀರ್ ‘ನಾಚಿಕೆಗೇಡಿನ ವಿಷಯ’ ಎಂದಿದ್ದಾರೆ.

ಪಂಜಾಬ್‌ನಲ್ಲಿರುವ ಕಾಶ್ಮೀರದ ಕೆಲವು ವಿದ್ಯಾರ್ಥಿಗಳು ತಮ್ಮ ಮೇಲೆ ಹಾಕಿ ಸ್ಟಿಕ್‌ಗಳಿಂದ ಆಕ್ರಮಣ ನಡೆಸಲಾಗಿದೆ ಎಂದು ದೂರಿದ್ದಾರೆ.

ರೋಹಿತ್ ಶರ್ಮಾ ಕೈಬಿಡಬೇಕೇ...?

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ, ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ತೂರಿಬಂದ ಪ್ರಶ್ನೆಗೆ ಉತ್ತರಿಸಿದ ನಾಯಕ ವಿರಾಟ್ ಕೊಹ್ಲಿ ‘ನೀವು ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಬಯಸುತ್ತೀರಾ’ ಎಂದು ಮರುಪ್ರಶ್ನೆ ಹಾಕಿದ್ದಾರೆ. ರೋಹಿತ್ ಬದಲಿಗೆ ಇಶಾನ್ ಕೀಶನ್‌ ಅವರಿಗೆ ಸ್ಥಾನ ನೀಡಬಾರದೇ ಎಂಬ ಪ್ರಶ್ನೆಗೆ ಜೋರಾಗಿ ನಕ್ಕು ತಲೆ ತಗ್ಗಿಸಿ ‘ಇದು ಅನಿರೀಕ್ಷಿತ ಪ್ರಶ್ನೆ ಮತ್ತು ಸಲಹೆ’ ಎಂದು ಬೇಸರದಿಂದ ಹೇಳಿದ್ದಾರೆ.

ವೀರೇಂದ್ರ ಸೆಹ್ವಾಗ್ ದಿಗ್ಭ್ರಮೆ

ಮೊಹಮ್ಮದ್ ಶಮಿ ಮೇಲಿನ ಆನ್‌ಲೈನ್ ದಾಳಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಶಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಸೆಹ್ವಾಗ್‌ ‘ನಾವೆಲ್ಲ ಶಮಿ ಅವರೊಂದಿಗಿದ್ದೇವೆ. ಅವರೊಬ್ಬ ಚಾಂಪಿಯನ್ ಆಟಗಾರ ಆಗಿದ್ದಾರೆ. ಭಾರತದ ಜೆರ್ಸಿ ತೊಟ್ಟು ಆಡುವ ಪ್ರತಿಯೊಬ್ಬರ ಮನದಲ್ಲೂ ಭಾರತ ಇರುತ್ತದೆ. ಆದ್ದರಿಂದ ಆನ್‌ಲೈನ್ ಮೂಲಕ ನಡೆಸುವ ಆಕ್ರಮಣಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮುಂದಿನ ಪಂದ್ಯದಲ್ಲಿ ನಿಮ್ಮ ಸಾಮರ್ಥ್ಯ ತೋರಿಸಿ ಶಮಿ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಹರಭಜನ್ ಸಿಂಗ್, ಯಜುವೇಂದ್ರ ಚಾಹಲ್, ಆರ್‌.ಪಿ.ಸಿಂಗ್ ಮೊದಲಾದವರು ಕೂಡ ಶಮಿ ಪರವಾಗಿ ಟ್ವೀಟ್ ಮಾಡಿದ್ದಾರೆ.

***

ತಂಡಕ್ಕೆ ಅಭಿನಂದನೆಗಳು. ಈ ಗೆಲುವಿನಲ್ಲಿ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶಹೀನ್ ಶಾ ಅಫ್ರಿದಿ ವಹಿಸಿದ ಪಾತ್ರ ಮಹತ್ವದ್ದು.

ಇಮ್ರಾನ್ ಖಾನ್‌ ಪಾಕಿಸ್ತಾನ ಪ್ರಧಾನಮಂತ್ರಿ

***

ನಾಳೆ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆಪಾಕಿಸ್ತಾನ ತಂಡ

ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ‍ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈಚೆಗೆ ಕ್ರಿಕೆಟ್ ಸರಣಿ ಆಡಲು ಬಂದು ಭದ್ರತೆಯ ನೆಪ ಹೇಳಿ ದಿಢೀರ್ ವಾಪಸ್ ಹೋದ ನ್ಯೂಜಿಲೆಂಡ್ ಕ್ರಮದಿಂದ ಪಾಕಿಸ್ತಾನಕ್ಕೆ ಮುಖಭಂಗವಾಗಿತ್ತು. ಇದರ ಸೇಡು ತೀರಿಸಿಕೊಳ್ಳುವ ಹಂಬಲವೂ ಬಾಬರ್ ಆಜಂ ಬಳಗಕ್ಕೆ ಇದೆ. ನ್ಯೂಜಿಲೆಂಡ್ ವಾಪಸ್ ಹೋದ ಕಾರ‌ಣ ಪಾಕ್ ತಂಡದ ವಿಶ್ವಕಪ್ ಸಿದ್ಧತೆಯ ಮೇಲೆಯೂ ದುಷ್ಪರಿಣಾಮ ಉಂಟಾಗಿತ್ತು.

ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಪಾಕಿಸ್ತಾನ ಈಗ ಬಲಿಷ್ಠವಾಗಿದೆ. ಹೀಗಾಗಿ ಕೇನ್ ವಿಲಿಯಮ್ಸನ್ ಪಡೆಗೆ ಈ ಪಂದ್ಯ ಕಠಿಣ ಸವಾಲು ಆಗುವ ಸಾಧ್ಯತೆ ಇದೆ. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೋತಿತ್ತು.

ಟಿ20 ರ‍್ಯಾಂಕಿಂಗ್‌

ಪಾಕಿಸ್ತಾನ 3

ನ್ಯೂಜಿಲೆಂಡ್‌ 4

ಟ್ವೆಂಟಿ–20ಯಲ್ಲಿ ಮುಖಾಮುಖಿ

ಪಂದ್ಯಗಳು 24

ಪಾಕಿಸ್ತಾನ ಜಯ 14

ನ್ಯೂಜಿಲೆಂಡ್ ಜಯ 10

ವಿಶ್ವಕಪ್‌ನಲ್ಲಿ ಬಲಾಬಲ

ತಂಡ;ಪಂದ್ಯ;ಜಯ;ಸೋಲು;ಟೈ

ಪಾಕಿಸ್ತಾನ;35;20;14;1

ನ್ಯೂಜಿಲೆಂಡ್‌;30;15;13;2

ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.