ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್
–ಪಿಟಿಐ ಚಿತ್ರ
ಅಮಸ್ಟೆಲ್‌ವೀನ್: ಭಾರತ ಪುರುಷರ ಹಾಕಿ ತಂಡವು ಸೋಮವಾರ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಯುರೋಪಿಯನ್ ಲೆಗ್ ಪಂದ್ಯದಲ್ಲಿ ಪುಟಿದೇಳುವ ಛಲದಲ್ಲಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 1–2ರಿಂದ ಒಲಿಂಪಿಕ್ಸ್ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಸೋತಿತ್ತು. ಆ ಪಂದ್ಯದ ಆರಂಭಿಕ ಹಂತದಲ್ಲಿ ಭಾರತದ ಆಟಗಾರರು ಉತ್ತಮ ಆಟವಾಡಿದ್ದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದ್ದರು. ಅದರಿಂದಾಗಿ ತಂಡ ಮುನ್ನಡೆ ಸಾಧಿಸಿತ್ತು.
ದಿಟ್ಟ ತಿರುಗೇಟು ನೀಡಿದ ಡಚ್ ಪಡೆಯು ತಿಜಿಸ್ ವ್ಯಾನ್ ಡ್ಯಾಮ್ ಅವರ ಎರಡು ಗೋಲುಗಳು ಭಾರತದ ಕೈಯಿಂದ ಗೆಲುವನ್ನು ಕಿತ್ತುಕೊಂಡವು.
‘ನಾವು ಮೊದಲಾರ್ಧದಲ್ಲಿ ಉತ್ತಮವಾಗಿ ಆಡಿದ್ದೆವು. ಮೂರನೇ ಕ್ವಾರ್ಟರ್‌ನಲ್ಲಿ ಅಷ್ಟೊಂದು ಚೆನ್ನಾಗಿ ಆಡಲಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಉತ್ತಮವಾಗಿ ಆಡಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಅವರು ಪಂದ್ಯದ ನಂತರ ಹೇಳಿದ್ದರು.
ಟೂರ್ನಿಯಲ್ಲಿ ಇನ್ನೂ ಏಳು ಪಂದ್ಯಗಳು ಬಾಕಿಯಿವೆ. ಈ ಹಂತದಲ್ಲಿ ಭಾರತ ತಂಡವು 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಸ್ಥಾನ ಪಡೆಯುವ ಛಲದಲ್ಲಿರುವ ಭಾರತ ತಂಡವು ಇನ್ನೂ ಉಳಿದಿರುವ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಗಳನ್ನು ಹೆಚ್ಚಿಸಿಕೊಳ್ಳಬೇಕಿದೆ.
ಈ ವರ್ಷಾರಂಭದಲ್ಲಿ ಭಾರತ ತಂಡವು ಭುವನೇಶ್ವರದಲ್ಲಿ ಪ್ರೊ ಲೀಗ್‌ನ ತವರು ಚರಣದ ಪಂದ್ಯಗಳನ್ನು ಆಡಿತ್ತು. ಅದರಲ್ಲಿ ನಡೆದ ಎಂಟು ಪಂದ್ಯಗಳಲ್ಲಿ 5ರಲ್ಲಿ ಗೆದ್ದಿತ್ತು. 15 ಅಂಕ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.