ADVERTISEMENT

ವಿವಾದ ಮೀರುವ ತವಕದಲ್ಲಿ ಉಭಯ ತಂಡಗಳು: ಟಾಸ್‌ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಮುಂಬೈ ಇಂಡಿಯನ್ಸ್‌–ಕಿಂಗ್ಸ್‌ ಇಲೆವನ್‌ ಪಂಜಾಬ್‌ ಪಂದ್ಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 10:44 IST
Last Updated 30 ಮಾರ್ಚ್ 2019, 10:44 IST
   

ಮೊಹಾಲಿ: ಇಲ್ಲಿನ ಪಿಸಿಎ ಅಂಗಳದಲ್ಲಿ ನಡೆಯಲಿರುವ ಐಪಿಎಲ್‌–2019ರ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದೆದರು ಟಾಸ್‌ ಗೆದ್ದಿರುವ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಈ ಬಾರಿ ತಾನಾಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಎದುರು ‘ಮಂಕಡಿಂಗ್‌’ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಪಂಜಾಬ್‌, ಎರಡನೇ ಪಂದ್ಯದಲ್ಲಿ ಕೊಲ್ಕತ್ತ ನೈಟ್‌ ರೈಡರ್ಸ್‌ ಎದುರು ಮತ್ತೊಂದು ಪ್ರಮಾದ ಸೃಷ್ಟಿಸಿತ್ತು. ಎದುರಾಳಿ ತಂಡದ ಆ್ಯಂಡ್ರೆ ರಸೆಲ್‌ ಔಟಾಗಿದ್ದರೂ ಆ ಸಂದರ್ಭದಲ್ಲಿ 30 ಗಜ ವೃತ್ತದ ಒಳಗೆ ನಾಲ್ವರು ಫೀಲ್ಡರ್‌ಗಳನ್ನು ಇರಿಸದ ಕಾರಣ ಅಂಪೈರ್‌ಗಳು ನೋಬಾಲ್‌ ತೀರ್ಪು ನೀಡಿದ್ದರು. ಇದು ಕಿಂಗ್ಸ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಇನ್ನೊಂದು ವಿವಾದಕ್ಕೆ ಮುಂಬೈ ಸಾಕ್ಷಿಯಾಯಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದೆದುರು ಕೊನೆಯ ಎಸೆತ ನೋಬಾಲ್‌ ಆಗಿದ್ದರೂ ಅಂಪೈರ್‌ ಮಾಡಿದ ಎಡವಟ್ಟು ದೊಡ್ಡ ಸುದ್ದಿಯಾಯಿತು. ಮುಂಬೈ ನೀಡಿದ್ದ 188 ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೊನೆಯ ಎಸೆತದಲ್ಲಿ 8 ರನ್‌ ಗಳಿಸಬೇಕಿತ್ತು. ಸ್ಟ್ರೈಕ್‌ನಲ್ಲಿ ಶಿವಂ ದುಭೆ ಹಾಗೂ ನಾನ್‌ ಸ್ಟ್ರೈಕ್‌ನಲ್ಲಿ ಎಬಿ ಡಿ ವಿಲಿಯರ್ಸ್‌ ಇದ್ದರು.

ADVERTISEMENT

ಈ ವೇಳೆ ವೇಗಿ ಲತೀಸ್‌ ಮಲಿಂಗಾ ಬೌಲಿಂಗ್ ಮಾಡುವಾಗ ಕ್ರೀಸ್‌ ಗೆರೆ ದಾಟಿ ನೋಬಾಲ್‌ ಎಸೆದದ್ದು ಟಿವಿ ಸ್ಕ್ರೀನ್‌ನಲ್ಲಿ ಸ್ಪಷ್ವವಾಗಿ ಗೋಚರಿಸಿತ್ತು. ಆದರೆ, ಅದನ್ನು ಅಂಫೈರ್‌ ಗಮನಿಸಿರಲಿಲ್ಲ. ಹೀಗಾಗಿ ಫ್ರೀ ಹಿಟ್‌ನಲ್ಲಿ ಪಂದ್ಯ ಗೆಲ್ಲಲು ಹೋರಾಡಬಹುದಾದ ಅವಕಾಶ ವಿರಾಟ್‌ ಕೊಹ್ಲಿ ಬಳಗದಿಂದ ಜಾರಿತ್ತು.

ಪಂದ್ಯಾವಳಿಯ ಆರಂಭದಲ್ಲಿಯೇ ಸುದ್ದಿಯಾದ ಈ ಮೂರು ವಿವಾದಗಳನ್ನು ಮೀರುವ ತವಕದಲ್ಲಿ ಆರ್‌.ಅಶ್ವಿನ್‌ ನೇತೃತ್ವದ ಪಂಜಾಬ್‌ ಹಾಗೂ ರೋಹಿತ್‌ ಶರ್ಮಾ ನೇತೃತ್ವದ ಮುಂಬೈ ತಂಡಗಳು ಕಣಕ್ಕಿಳಿಯುತ್ತಿವೆ.

ತಲಾ ಎರಡು ಪಂದ್ಯಳನ್ನಾಡಿರುವ ಉಭಯ ತಂಡಗಳು ಒಂದೊಂದರಲ್ಲಿ ಜಯ ಸಾಧಿಸಿದ್ದು, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವುದರಿಂದಪಂದ್ಯ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.