ADVERTISEMENT

IND vs ENG: ಪುಣೆಗೆ ಬಂದಿಳಿದ ಭಾರತ ಕ್ರಿಕೆಟ್ ತಂಡ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 14:44 IST
Last Updated 21 ಮಾರ್ಚ್ 2021, 14:44 IST
ಭಾರತ ಡಂಡ –‍ಪಿಟಿಐ ಚಿತ್ರ
ಭಾರತ ಡಂಡ –‍ಪಿಟಿಐ ಚಿತ್ರ   

ಪುಣೆ: ಟೆಸ್ಟ್ ಮತ್ತು ಟಿ20 ಸರಣಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಆಡುವುದಕ್ಕಾಗಿ ಇಲ್ಲಿಗೆ ಬಂದಿಳಿದಿದೆ. ಮೂರು ‍ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಇದೇ 23ರಂದು ನಡೆಯಲಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ ನಡೆದಿದ್ದವು. ಉಳಿದೆರಡು ಪಂದ್ಯಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಸರಣಿಯಲ್ಲಿ ಭಾರತ 3–1ರ ಜಯ ಸಾಧಿಸಿತ್ತು. ಟಿ20 ಸರಣಿಯ ಎಲ್ಲ ಐದು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆದಿದ್ದವು. ಭಾರತ 3–2ರಲ್ಲಿ ಗೆಲುವು ಪಡೆದಿತ್ತು.

ಅಹಮದಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಸಂಜೆ 4.45ರ ವೇಳೆ ಪುಣೆ ತಲುಪಿದ ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ, ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಇದ್ದಾರೆ. ಪಂದ್ಯಗಳು ಗಾಹುಂಜೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಪ್ರೇಕ್ಷಕರಿಗೆ ಅವಕಾಶ ಇಲ್ಲ.

ADVERTISEMENT

18 ಮಂದಿಯ ತಂಡದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ಶುಭಮನ್ ಗಿಲ್‌, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಭುವನೇಶ್ವರ್ ಕುಮಾರ್ ಅವರೂ ಇದ್ದಾರೆ. ಭಾರತ ಕಳೆದ ವರ್ಷ ಕೊನೆಯದಾಗಿ ಏಕದಿನ ಸರಣಿ ಆಡಿದ್ದು ಆಸ್ಟ್ರೇಲಿಯಾ ವಿರುದ್ಧ 1–2ರಲ್ಲಿ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.