ADVERTISEMENT

IND vs AUS: ’ಬಾಕ್ಸಿಂಗ್ ಡೇ‘ ಟೆಸ್ಟ್‌ಗೆ ಆಟಗಾರರ ಕಠಿಣ ತಾಲೀಮು

ಫಿಟ್‌ನೆಸ್ ಪರೀಕ್ಷೆ ಕೊಟ್ಟ ರವೀಂದ್ರ ಜಡೇಜ: ಶಮಿ ಬದಲು ಸೈನಿಗೆ ಅವಕಾಶ ಸಾಧ್ಯತೆ; ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ನಟರಾಜನ್

ಪಿಟಿಐ
Published 24 ಡಿಸೆಂಬರ್ 2020, 21:01 IST
Last Updated 24 ಡಿಸೆಂಬರ್ 2020, 21:01 IST
ಅಭ್ಯಾಸದಲ್ಲಿಆರ್. ಅಶ್ವಿನ್, ಅಜಿಂಕ್ಯ ರಹಾನ, ರವೀಂದ್ರ ಜಡೇಜ ಮತ್ತು ಚೇತೇಶ್ವರ್ ಪೂಜಾರ  –ಎಎಫ್‌ಪಿ ಚಿತ್ರ
ಅಭ್ಯಾಸದಲ್ಲಿಆರ್. ಅಶ್ವಿನ್, ಅಜಿಂಕ್ಯ ರಹಾನ, ರವೀಂದ್ರ ಜಡೇಜ ಮತ್ತು ಚೇತೇಶ್ವರ್ ಪೂಜಾರ  –ಎಎಫ್‌ಪಿ ಚಿತ್ರ   

ಮೆಲ್ಬರ್ನ್: ಕ್ರಿಸ್‌ಮಸ್‌ ಹಬ್ಬದ ಮಾರನೇ ದಿನವೇ ಭಾರತ ಕ್ರಿಕೆಟ್ ತಂಡದ ಮುಂದೆ ಹೊಸ ಸವಾಲು ಎದುರಾಗಲಿದೆ.

ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡಲು ಭಾರತ ತಂಡದ ಕ್ರಿಕೆಟಿಗರು ಕಠಿಣ ತಾಲೀಮು ನಡೆಸಲಿದ್ದಾರೆ.

ಕುಸ್ತಿಪಟುಗಳ ಮಾದರಿಯಲ್ಲಿ ತಾಲೀಮು ನಡೆಸಿದ್ದು ಗಮನ ಸೆಳೆಯಿತು. ಗುರುವಾರ ನಡೆದ ತಂಡದ ಅಭ್ಯಾಸದಲ್ಲಿ ಕುಸ್ತಿ ಕ್ರೀಡೆಯಲ್ಲಿ ರೂಢಿಯಲ್ಲಿರುವ ವ್ಯಾಯಾಮಗಳನ್ನು ಆಟಗಾರರು ಮಾಡಿದ್ದು ಎದ್ದು ಕಂಡಿತು. ಕಳೆದ ವಾರ ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು ಹೀನಾಯ ಸೋಲು ಅನುಭವಿಸಿತ್ತು.

ADVERTISEMENT

ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಜಯಿಸುವುದು ಮುಖ್ಯವಾಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಕನ್‌ಕಷನ್‌ ಗೊಳಗಾಗಿದ್ದ ರವೀಂದ್ರ ಜಡೇಜ ಅವರ ಫಿಟ್‌ನೆಸ್ ಪರೀಕ್ಷೆಯೂ ಈ ಸಂದರ್ಭದಲ್ಲಿ ನಡೆಯಿತು.

49 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜ, ಒಟ್ಟು 1869 ರನ್ ಗಳಿಸಿದ್ದಾರೆ. ಎಡಗೈ ಸ್ಪಿನ್ನರ್ ಜಡೇಜ 213 ವಿಕೆಟ್‌ಗಳನ್ನೂ ಗಳಿಸಿದ್ದಾರೆ. ಆದರೆ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ಎರಡು ಟಿ20 ಪಂದ್ಯ ಮತ್ತು ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಇದೀಗ ತಂಡಕ್ಕೆ ಮರಳಲು ಸಿದ್ಧರಾಗಿದ್ಧಾರೆ.

ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡು ಹೊರಬಿದ್ದಿರುವ ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ಆಡಲು ನವದೀಪ್ ಸೈನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಎಂಸಿಜಿ ನೆಟ್ಸ್‌ನಲ್ಲಿ ಅವರು ಬಹಳ ಹೊತ್ತು ಬೌಲಿಂಗ್ ಮಾಡಿದರು. ಟಿ20 ಟೂರ್ನಿಯಲ್ಲಿ ಆಡಿದ್ದ ತಮಿಳುನಾಡಿನ ಎಡಗೈ ಮಧ್ಯಮವೇಗಿ ಟಿ. ನಟರಾಜನ್ ಕೂಡ ಬೌಲಿಂಗ್ ಮಾಡಿದರು.

ನಾಯಕ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರನ್ನು ನಟರಾಜನ್ ಹಲವು ಬಾರಿ ಬೀಟ್ ಮಾಡಿದರು. ಇನ್ನೊಂದೆಡೆ ಕೆ.ಎಲ್. ರಾಹುಲ್ ಕೂಡ ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ವಿಕೆಟ್‌ಕೀಪರ್ ರಿಷಭ್ ಪಂತ್ ಕೂಡ ಬಹಳಷ್ಟು ಹೊತ್ತು ಕೀಪಿಂಗ್ ಮತ್ತು ಬ್ಯಾಟಿಂಗ್‌ ಮಾಡಿದರು.

ಇದರಿಂದಾಗಿ ಇವರಿಬ್ಬರೂ 11ರ ಪಟ್ಟಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಎಲ್ಲ ಆಟಗಾರರ ಕೌಶಲಗಳು ಮತ್ತು ಫಿಟ್‌ನೆಸ್‌ ಅನ್ನು ಗಮನಿಸಿದರು.

ರಹಾನೆ ಜೊತೆಗೂ ಮಾತುಕತೆ ನಡೆಸಿದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಅಭ್ಯಾಸ
ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.

ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಷೇನ್ ಅವರಿಗೆ ಮುಖ್ಯ ಕೋಚ್ ಜಸ್ಟೀನ್ ಲ್ಯಾಂಗರ್ ವಿಶೇಷ ಕ್ಲಾಸ್ ತೆಗೆದುಕೊಂಡರು.

ನೆಟ್ಸ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರಿಗೆ ಶ್ರೀಲಂಕಾದ ಮಾಜಿ ಆಫ್‌ಸ್ಪಿನ್ನರ್ ಸೂರಜ್ ರಣದೀವ್ ಅವರು ಮಾರ್ಗದರ್ಶನ ನೀಡಿದರು.

ಭಾರತ ತಂಡಕ್ಕೆ ಗಂಭೀರ್ ಸಲಹೆ
ಅಡಿಲೇಡ್ ಟೆಸ್ಟ್‌ನಲ್ಲಿ ಮೊದಲೆರಡು ದಿನಗಳಲ್ಲಿ ಮೇಲುಗೈ ಸಾಧಿಸಿದ್ದನ್ನು ಭಾರತದ ಆಟಗಾರರು ಮರೆಯಬಾರದು . ಅದೇ ಹುರುಪಿನಲ್ಲಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ.

ಭಾರತ ತಂಡವು ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಗಳಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ 36 ರನ್‌ಗಳಿಗೆ ತಂಡವು ಕುಸಿಯಿತು. ಎಂಟು ವಿಕೆಟ್‌ಗಳಿಂದ ಸೋತಿತು.

’ಪಂದ್ಯದ ಮೊದಲ ಎರಡು ದಿನಗಳಲ್ಲಿ ಆಸ್ಟ್ರೇಲಿಯಾದ ಎದುರು ಮೇಲುಗೈ ಸಾಧಿಸಿದ್ದನ್ನು ಮರೆಯಲೇಬಾರದು. ಆದರೆ ಫಲಿತಾಂಶವು ಅವರನ್ನು ಸದಾ ಕಾಡುವಂತೆ ಆಗಬಾರದು. ಆಗಿದ್ದನ್ನು ಹಿಂದಿಕ್ಕಿ ಮಂದೆ ನಡೆಯಬೇಕು‘ ಎಂದು ಗಂಭೀರ್ ಹೇಳಿದ್ದಾರೆ.

’ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾರತ ತಂಡದ ಶ್ರೇಷ್ಠ ಆಟಗಾರ ಮತ್ತು ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿಲ್ಲ. ಆದ್ದರಿಂದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರ ಮೇಲೆ ಅಪಾರ ನಿರೀಕ್ಷೆಗಳಿವೆ. ಶಮಿ ಕೂಡ ತಂಡದಲ್ಲಿಲ್ಲ. ಬೌಲಿಂಗ್ ವಿಭಾಗವನ್ನು ಸಬಲಗೊಳಿಸಲು ರಹಾನೆ ಯೋಜನೆ ರೂಪಿಸಬೇಕು‘ ಎಂದು ಹೇಳಿದರು.

’ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಅವರನ್ನು ಕಣಕ್ಕಿಳಿಸಬೇಕು. ಇದರಿಂದ ತಂಡದ ಬ್ಯಾಟಿಂಗ್ ಬಲಾಢ್ಯವಾಗಲಿದೆ‘ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.