ADVERTISEMENT

ಬೆರಳು ಮುರಿತ: ಐಪಿಎಲ್‌ನಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್ ಆಟಗಾರ ಮ್ಯಾಕ್ಸ್‌ವೆಲ್

ಪಿಟಿಐ
Published 1 ಮೇ 2025, 9:44 IST
Last Updated 1 ಮೇ 2025, 9:44 IST
ಗ್ಲೆನ್‌ ಮ್ಯಾಕ್ಸ್‌ವೆಲ್ 
ಗ್ಲೆನ್‌ ಮ್ಯಾಕ್ಸ್‌ವೆಲ್    

ಚೆನ್ನೈ: ಬೆರಳು ಮುರಿತಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮತ್ತು ಐಪಿಎಲ್‌ನ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಪಂದ್ಯಾವಳಿಯ ಇನ್ನುಳಿದ ಪಂದ್ಯಗಳಿಂದಲೇ ಹೊರಬಿದ್ದಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿದೆ.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮಳೆಯಿಂದ ರದ್ದಾದ ಪಂದ್ಯಕ್ಕೂ ಮುನ್ನ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದರು. ಆ ಪಂದ್ಯದಲ್ಲಿ ಅವರು 7 ರನ್‌ಗಳಿಗೆ ಔಟಾಗಿದ್ದರು.

‘ಗ್ಲೆನ್ ಮ್ಯಾಕ್ಸ್‌ವೆಲ್ ಬೆರಳಿನ ಗಾಯದಿಂದಾಗಿ ಈ ಋತುವಿನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ’ಎಂದು ಕಿಂಗ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ADVERTISEMENT

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಬದಲಿಗೆ ಸೂರ್ಯಾಂಶ್ ಶೆಡ್ಜ್ ಅವರನ್ನು ಅವರನ್ನು ಆಡಿಸಲಾಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಲ್ಕು ವಿಕೆಟ್‌ಗಳಿಂದ ಜಯ ಗಳಿಸಿತ್ತು.

ಈ ವರ್ಷದ ಐಪಿಎಲ್‌ ಸರಣಿಯಲ್ಲಿ ಮ್ಯಾಕ್ಸ್‌ವೆಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಏಳು ಪಂದ್ಯಗಳಲ್ಲಿ ಕೇವಲ 6ರ ಸರಾಸರಿಯೊಂದಿಗೆ 48 ರನ್‌ಗಳನ್ನು ಗಳಿಸಿದ್ದಾರೆ. 4 ವಿಕೆಟ್ ಪಡೆದಿದ್ದಾರೆ.

‘ದುರದೃಷ್ಟವಶಾತ್, ಮ್ಯಾಕ್ಸಿ ಅವರ ಬೆರಳು ಮುರಿದಿದೆ. ಹಿಂದಿನ ಪಂದ್ಯಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಆದರೆ, ಅದು ಅಷ್ಟು ಗಂಭೀರವಾಗಿದೆ ಎಂದು ಅವರು ಭಾವಿಸಿರಲಿಲ್ಲ. ಸ್ಕ್ಯಾನ್‌ನಲ್ಲಿ ಬೆರಳು ಮುರಿದಿರುವುದು ಗೊತ್ತಾಗಿದೆ. ಆ ಬಳಿಕ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ’ಎಂದು ತಂಡದ ಸಹ ಆಟಗಾರ ಮಾರ್ಕಸ್ ಸ್ಟೋಯಿನಸ್ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಸೂಕ್ತ ಪರ್ಯಾಯ ಆಟಗಾರನನ್ನು ಹುಡುಕುತ್ತಿದ್ದೇವೆ. ಅದು ಅಷ್ಟು ಸುಲಭವಿಲ್ಲ ಎಂದು ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಈವರೆಗೆ ಆಡಿರುವ 10 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ತಂಡ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೋಲ್ಕತ್ತ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಒಂದು ಅಂಕ ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.