ADVERTISEMENT

ಭಾರತ ಸೀನಿಯರ್–ಭಾರತ ಎ ಇಂಟ್ರಾಸ್ಕ್ವಾಡ್ ಅಭ್ಯಾಸ ಪಂದ್ಯ:ಬೌಲಿಂಗ್ ಪಡೆಗೆ ‘ಟೆಸ್ಟ್’

ಭಾರತ ಸೀನಿಯರ್–ಭಾರತ ಎ ಇಂಟ್ರಾಸ್ಕ್ವಾಡ್ ಅಭ್ಯಾಸ ಪಂದ್ಯ

ಪಿಟಿಐ
Published 12 ಜೂನ್ 2025, 16:15 IST
Last Updated 12 ಜೂನ್ 2025, 16:15 IST
ರವೀಂದ್ರ ಜಡೇಜ ಫೀಲ್ಡಿಂಗ್ ಅಭ್ಯಾಸ  –ಪಿಟಿಐ ಚಿತ್ರ
ರವೀಂದ್ರ ಜಡೇಜ ಫೀಲ್ಡಿಂಗ್ ಅಭ್ಯಾಸ  –ಪಿಟಿಐ ಚಿತ್ರ   

ಬೆಕ್‌ಹ್ಯಾಮ್, ಕೆಂಟ್: ಎಡಗೈ ಸ್ಪಿನ್ ಜೋಡಿ  ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಅವರು ಶುಕ್ರವಾರ ಇಲ್ಲಿ ನಡೆಯಲಿರುವ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಭಾರತ ಸೀನಿಯರ್ ತಂಡ  ಹಾಗೂ ಭಾರತ ಎ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇವರಿಬ್ಬರಲ್ಲಿ ಯಾರು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ ಮತ್ತು ಸರಣಿಯಲ್ಲಿ ಆಡಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.  

ಜೂನ್ 20ರಂದು ಇಂಗ್ಲೆಂಡ್ ಎದುರಿನ ಸರಣಿಯ ಮೊದಲ ಪಂದ್ಯವು ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಭಾರತ ತಂಡಕ್ಕೆ ಲಭಿಸಲಿರುವ ಏಕೈಕ ಅಭ್ಯಾಸ ಪಂದ್ಯ ಇದಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಈ ಪಂದ್ಯಕ್ಕೆ ಮಾಧ್ಯಮ ಆಥವಾ ಜನರಿಗೆ ಪ್ರವೇಶವಿಲ್ಲ. ‘ಕ್ಲೋಸ್ಡ್‌ ಡೋರ್‌’ ಪಂದ್ಯ ಇದಾಗಿದೆ. ಅನಗತ್ಯ ಟೀಕೆ ಅಥವಾ ಎದುರಾಳಿಗಳಿಂದ ತಂತ್ರಗಾರಿಕೆ ಗೋಪ್ಯವಾಗಿಡಲು ಯುರೋಪಿಯನ್ ಫುಟ್‌ಬಾಲ್ ಕ್ಲಬ್‌ಗಳೂ ಈ ಮಾದರಿಯನ್ನು ಅನುಸರಿಸುತ್ತವೆ. 

ಈಚೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗಲೂ ಭಾರತ ತಂಡವು ಇದೇ ರೀತಿ ಮಾಡಿತ್ತು. 

ADVERTISEMENT

‘ದಿನವೊಂದಕ್ಕೆ 90 ಓವರ್‌ಗಳನ್ನು ಆಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಮುಖ್ಯ. ಅದು ಇಂತಹ ಅಭ್ಯಾಸ ಪಂದ್ಯಗಳಿಂದ ರೂಢಿಯಾಗುತ್ತದೆ. ನೆಟ್ ಪ್ರಾಕ್ಟಿಸ್‌ಗಳಲ್ಲಿ ಸಾಧ್ಯವಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಆಗುವ ಲೋಪಗಳನ್ನು ತಿದ್ದಿಕೊಳ್ಳುವತ್ತ ಗಮನಹರಿಸಬೇಕು’ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.

ಇದು ನಾಲ್ಕು ದಿನಗಳ ಪಂದ್ಯವಾಗಿದೆ. ಒಟ್ಟು 360 ಓವರ್‌ಗಳ ಆಟಕ್ಕೆ ಅವಕಾಶ ಇದೆ.  ಅಧಿಕೃತ ಪ್ರಥಮದರ್ಜೆ ಪಂದ್ಯದ ಮಾನ್ಯತೆ ಇಲ್ಲ. ಬೌಲಿಂಗ್ ಸಂಯೋಜನೆಯ ಪ್ರಯೋಗಕ್ಕೂ ಈ ಪಂದ್ಯವು ವೇದಿಕೆಯಾಗಲಿದೆ. ವೇಗಿಗಳು ಅಥವಾ ಸ್ಪಿನ್ನರ್‌ಗಳಲ್ಲಿ ಯಾರು ಪ್ರಭಾವಶಾಲಿಗಳಾಗಲಿದ್ದರೆಂಬುದನ್ನು ತಂಡದ ಮ್ಯಾನೇಜ್‌ಮೆಂಟ್ ನಿಗಾ ವಹಿಸಲಿದೆ. 

ಜಡೇಜ ತಮ್ಮ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಕಾಣಿಕೆ ನೀಡಬಲ್ಲರು. ಅದರಲ್ಲೂ ಎಸ್‌ಎಎನ್‌ಎ (ಸೌಥ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ಅವರು ಪರಿಣಾಮಕಾರಿ ಆಲ್‌ರೌಂಡರ್ ಆಗಿದ್ದಾರೆ. 

ಕುಲದೀಪ್ ಅವರ ಬೌಲಿಂಗ್‌ನಲ್ಲಿರುವ ವೈವಿಧ್ಯತೆಯು ಇಂಗ್ಲೆಂಡ್‌ ತಂಡದ ‘ಬಾಝ್‌ಬಾಲ್‌’ ತಂತ್ರಕ್ಕೆ ತಿರುಮಂತ್ರವಾಗಬಹುದು. ವೇಗಿ ಜಸ್‌ಪ್ರೀತ್ ಬೂಮ್ರಾ ಅವರೊಂದಿಗೆ ಜೊತೆ ನಿಭಾಯಿಸುವ ಸಾಮರ್ಥ್ಯ ಅವರಿಗೆ ಇದೆ. ಪಂದ್ಯದಲ್ಲಿ 20 ವಿಕೆಟ್ ಪಡೆಯುವ ತಂಡದ ಆಶಯಕ್ಕೆ ತಕ್ಕ ಬೌಲಿಂಗ್ ಮಾಡಬಲ್ಲರು. 

ಇದಲ್ಲದೇ ವೇಗದ ವಿಭಾಗದಲ್ಲಿ ಆಕಾಶ್ ದೀಪ್ ಅವರ ಫುಲ್ಲರ್ ಲೆಂಗ್ತ್ ಮತ್ತು ಪ್ರಸಿದ್ಧ ಕೃಷ್ಣ ಅವರ ಬ್ಯಾಕ್ ಆಫ್‌ ಲೆಂಗ್ತ್ ಎಸೆತಗಳ ನಿಖರತೆಯನ್ನು ಅವಲೋಕಿಸಲು ಕೋಚ್ ಸಿಬ್ಬಂದಿ ಮತ್ತು ನಾಯಕ ಶುಭಮನ್ ಗಿಲ್ ಅವರಿಗೆ ಈ ಪಂದ್ಯದ ಮೂಲಕ ಸಿಗಲಿದೆ. 

ಬೂಮ್ರಾ ಅವರು ಆರು ತಿಂಗಳುಗಳ ನಂತರ ರೆಡ್‌ ಬಾಲ್ ಕ್ರಿಕೆಟ್‌ ಆಡಲಿದ್ದಾರೆ. ಅವರಿಗೂ ಈ ಅಭ್ಯಾಸ ಪಂದ್ಯದಲ್ಲಿ ಕೆಲವು ಸ್ಪೆಲ್‌ಗಳ ಬೌಲಿಂಗ್ ಮಾಡುವ ಅವಕಾಶವಾಗಲಿದೆ. ಇದು ಅವರ ’ಫಿಟ್‌ನೆಸ್ ಟೆಸ್ಟ್‌’ ಕೂಡ ಆಗಬಹುದು. 

ಅಭ್ಯಾಸ ನಿರತ ಕುಲದೀಪ್ ಯಾದವ್  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.