ADVERTISEMENT

IPL-2020: ಪ್ಲೇ ಆಫ್‌ ಕನಸಿನಲ್ಲಿ ವಿರಾಟ್ ಬಳಗ

‘ಸಮಾಧಾನಕರ’ ಗೆಲುವಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಚಿತ್ತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 19:45 IST
Last Updated 24 ಅಕ್ಟೋಬರ್ 2020, 19:45 IST
ವಿರಾಟ್ ಕೊಹ್ಲಿ – ಯಜುವೇಂದ್ರ ಚಾಹಲ್
ವಿರಾಟ್ ಕೊಹ್ಲಿ – ಯಜುವೇಂದ್ರ ಚಾಹಲ್   

ದುಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್‌ ಹೊಸ್ತಿಲಲ್ಲಿ ನಿಂತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಲೀಗ್ ಹಂತದಲ್ಲಿಯೇ ಹೊರಬೀಳುವುದು ಖಚಿತವಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ಮುಖಾಮುಖಿಯಾಗಲಿವೆ.

ಟೂರ್ನಿಯ ಅಂಕಪಟ್ಟಿಯಲ್ಲಿ 14 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಏಳರಲ್ಲಿ ಜಯಿಸಿ, ಮೂರರಲ್ಲಿ ಸೋತಿದೆ. ಚೆನ್ನೈ 11 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆದ್ದಿದೆ.

ಈಗ ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದು ಒಂದಿಷ್ಟು ಗೌರವದೊಂದಿಗೆ ನಿರ್ಗಮಿಸುವ ಯೋಚನೆಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಮುಂದಿರುವ ಹಾದಿಯು ಕಠಿಣವಾಗಿದೆ.

ADVERTISEMENT

ಬೆಂಗಳೂರು ತಂಡವು ತನ್ನ ಕಳೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ದಾಖಲೆ ಬೌಲಿಂಗ್ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿತ್ತು. ಸುಲಭ ಜಯ ಸಾಧಿಸಿತ್ತು. ಸಿರಾಜ್ ಜೊತೆಗೆ ಕ್ರಿಸ್ ಮೊರಿಸ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಮತ್ತು ಇಸುರು ಉಡಾನ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನ ತೋರಿಸಬಲ್ಲರು.

ದೇವದತ್ತ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್, ಎಬಿ ಡಿವಿಲಿಯರ್ಸ್ ಮತ್ತು ಗುರುಕೀರತ್ ಸಿಂಗ್ ರನ್‌ಗಳ ಹೊಳೆ ಹರಿಸುವ ಬ್ಯಾಟ್ಸ್‌ಮನ್‌ಗಳು. 15 ದಿನಗಳ ಹಿಂದೆ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಅಬ್ಬರದ ಬ್ಯಾಟಿಂಗ್‌ಗೆ ಚೆನ್ನೈ ಶರಣಾಗಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶ ಧೋನಿ ಬಳಗಕ್ಕೆ ಇದೆ.

ಆದರೆ, ಶನಿವಾರದ ಪಂದ್ಯದಲ್ಲಿ ಚೆನ್ನೈ ಆಟಗಾರರು ಮುಂಬೈ ಎದುರು ಆಡಿದ ರೀತಿಯನ್ನು ನೋಡಿದರೆ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವುದೇ ಎಂಬುದೇ ಪ್ರಶ್ನೆ. ಪಂದ್ಯದಲ್ಲಿ ತಂಡದ ಮೊತ್ತವು 50 ರನ್‌ಗಳಾಗುಷ್ಟ್ರರಲ್ಲಿ ಏಳು ವಿಕೆಟ್‌ಗಳು ಪತನವಾಗಿದ್ದವು. ಸ್ಯಾಮ್ ಕರನ್ ದಿಟ್ಟತನದಿಂದ ಅರ್ಧಶತಕ ಬಾರಿಸದೇ ಹೋಗಿದ್ದರೆ ತಂಡವು ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಬೇಕಿತ್ತು. ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಚೆನ್ನೈ ಬೌಲರ್‌ಗಳು ಮುಂಬೈನ ಒಂದೂ ವಿಕೆಟ್ ಗಳಿಸಿರಲಿಲ್ಲ. ಇಂತಹ ಕ್ಲಿಷ್ಟಕರ ಸ್ಥಿತಿಯಿಂದ ಚೆನ್ನೈ ಜಯದ ಹಾದಿ ಹಿಡಿಯವುದು ಸುಲಭದ ಮಾತಂತೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.