ADVERTISEMENT

ಐಪಿಎಲ್ ಅಂಗಳದ ‘ನವದುರ್ಗೆ’ ನವನೀತಾ ಗೌತಮ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 19:30 IST
Last Updated 21 ಅಕ್ಟೋಬರ್ 2020, 19:30 IST
ನವನೀತಾ ಗೌತಮ್
ನವನೀತಾ ಗೌತಮ್   

‘ಮೂರು ವರ್ಷಗಳ ಹಿಂದೆ ನಾನು ಭಾರತಕ್ಕೆ ತೆರಳಿ ಕ್ರೀಡಾ ಮಸಾಜ್ ಥೆರಪಿ ವೃತ್ತಿ ಮತ್ತು ಉನ್ನತ ವ್ಯಾಸಂಗ ಮಾಡುತ್ತೇನೆಂದು ಹೊರಟಾಗ ಅಪ್ಪ–ಅಮ್ಮನಿಗೆ ಭಯವಿತ್ತು. ಅಲ್ಲಿ ಸಾಂಸ್ಕೃತಿಕ ತಲ್ಲಣ ಎದುರಿಸಬೇಕಾದೀತು. ಪುರುಷ ಕ್ರೀಡಾಪಟುಗಳಿಗೆ ಮಹಿಳಾ ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸುವುದು ಅಷ್ಟು ಸುಲಭವಾಗಲಿಕ್ಕಿಲ್ಲ ಎಂದು ಎಚ್ಚರಿಸಿದ್ದರು. ಆದರೆ ನಾನು ಇಲ್ಲಿಗೆ ಬಂದೆ. ನಿಧಾನವಾಗಿ ಎಲ್ಲ ಸವಾಲುಗಳನ್ನು ಮೀರಿ ನಿಂತು. ಒಂದು ಗೌರವಯುತ ಸಮೂಹದಲ್ಲಿದ್ದೇನೆ’–

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ತಂಡದ ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವ ನವನೀತಾ ಗೌತಮ್ ಮನದಾಳದ ಮಾತುಗಳಿವು. ಕೆನಡಾದಲ್ಲಿ ಜನಿಸಿದ್ದ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ನವನೀತಾ ಇದೇ ಮೊದಲ ಸಲ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ. ಆದರೆ ಅವರು ಮೂರು ವರ್ಷಗಳಿಂದ ಭಾರತದ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿರುವ ಅನುಭವಿ. ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ನೆರವು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೂರನೇ ಮತ್ತು ಭಾರತೀಯ ಮೂಲದ ಮೊದಲ ಮಹಿಳೆಯೂ ಇವರಾಗಿದ್ದಾರೆ.

ಡೆಕ್ಕನ್ ಚಾರ್ಜರ್ಸ್‌ ತಂಡದಲ್ಲಿ ಆ್ಯಷ್ಲೀ ಜಾಯ್ಸ್‌ (2008) ಮತ್ತು ಪೆಟ್ರಿಸಿಯಾ ಜೆಂಕಿನ್ಸ್‌ (2009) ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ನವನೀತಾ ಆರ್‌ಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ಭಾರತ ಒಂದು ಅದ್ಭುತವಾದ ದೇಶ. ಇಲ್ಲಿಯೇ ನನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಗಟ್ಟಿ ನಿರ್ಧಾರದೊಂದಿಗೆ ಇಲ್ಲಿ ಬಂದಿದ್ದೆ. ಆದ್ದರಿಂದಲೇ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಂಡೆ. ಆದರೆ, ನನ್ನ ವೈಯಕ್ತಿಕ ಶಿಸ್ತು ಮತ್ತು ನಿಯಮಗಳಿಗೆ ಬದ್ಧಳಾಗಿದ್ದೆ. ಆದ್ದರಿಂದ ಇಲ್ಲಿ ಹೊಂದಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ಬೇಕಾಯಿತು. ಆದರೆ, ಈಗ ಎಲ್ಲವೂ ಸರಿಯಾಗಿದೆ. ಸಹಬಾಳ್ವೆ, ಸಹೋದರತ್ವದ ವಾತಾವರಣದಲ್ಲಿದ್ದೇನೆ. ಸುಮಾರು 20 ಮಂದಿ ಸಹೋದರರು ನನ್ನ ಸುತ್ತಮುತ್ತಲಿದ್ದಾರೆ ಎಂಬ ಭಾವನೆ ನನಗಿದೆ. ಆರೋಗ್ಯ, ಕೌಟುಂಬಿಕ ಮೌಲ್ಯಗಳು, ಆಹಾರ ವೈವಿಧ್ಯತೆಗಳೆಲ್ಲ ಬಹಳ ಪ್ರಿಯವಾಗಿವೆ’ ಎನ್ನುತ್ತಾರೆ ನವನೀತಾ.

ನವನೀತಾ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅವರ ತಂದೆಯೇ ಕಾರಣ. ‘1989ರಲ್ಲಿ ವೃತ್ತಿಗಾಗಿ ಕೆನಡಾಕ್ಕೆ ನಮ್ಮ ಕುಟುಂಬ ತೆರಳಬೇಕಾಯಿತು. ಅಪ್ಪ ಅಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಟಿವಿಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ನಾನೂ ಅಪ್ಪನೊಂದಿಗೆ ಪಂದ್ಯಗಳನ್ನು ನೋಡುತ್ತಿದ್ದೆ. ಬಹುಬೇಗ ಕ್ರಿಕೆಟ್ ನನಗೆ ಪ್ರಿಯವಾಯಿತು‘ ಎನ್ನುತ್ತಾರೆ.

ಈ ಕ್ರೀಡಾಸಕ್ತಿಯಿಂದಾಗಿ ನವನೀತಾ ಮಸಾಜ್ ಥೆರಪಿ ಸೈನ್ಸ್‌ನತ್ತ ಆಕರ್ಷಿತರಾದರು. ಕಿನ್ಸಿಯಾಲಜಿ (ಅಂಗರಚನಾಶಾಸ್ತ್ರ) ಯಲ್ಲಿ ಪದವಿ ಗಳಿಸಿದ್ದಾರೆ. ಇದೀಗ ಆರ್‌ಸಿಬಿಯ ಯಶಸ್ಸಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.