ADVERTISEMENT

ಐಪಿಎಲ್: ಆಟಗಾರರ ಕುಟುಂಬದ ಪ್ರಯಾಣಕ್ಕೆ ಫ್ರ್ಯಾಂಚೈಸ್‌ಗಳು ನಿರ್ಧರಿಸಲಿವೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 3:27 IST
Last Updated 31 ಜುಲೈ 2020, 3:27 IST
ಮಹೇಂದ್ರಸಿಂಗ್ ಧೋನಿ, ಪತ್ನಿ ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ –ಸಂಗ್ರಹ ಚಿತ್ರ
ಮಹೇಂದ್ರಸಿಂಗ್ ಧೋನಿ, ಪತ್ನಿ ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ –ಸಂಗ್ರಹ ಚಿತ್ರ   

ಮುಂಬೈ: ಯುನೈಟೆಡ್‌ ಅರಬ್ ಎಮಿರೆಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆದರೆ ಆಟಗಾರರು ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೊಗುವ ಕುರಿತು ಆಯಾ ಫ್ರ್ಯಾಂಚೈಸ್‌ಗಳು ನಿರ್ಧರಿಸಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕು ತಡೆಗಾಗಿ ಐಪಿಎಲ್‌ನಲ್ಲಿ ಆಟಗಾರರು, ಸಿಬ್ಬಂದಿ ಮತ್ತಿತರರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲಿಯೇ ಬಿಸಿಸಿಐ ಫ್ರ್ಯಾಂಚೈಸ್‌ಗಳಿಗೆ ಕಳಿಸಲಿದೆ.

’ಜೀವ ಸುರಕ್ಷಾ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಆಟಗಾರರು, ಅವರ ಕುಟುಂಬದ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆಟಗಾರರು ತಮ್ಮ ಪತ್ನಿ, ಮಕ್ಕಳು ಅಥವಾ ಸಂಗಾತಿಯನ್ನು ಕರೆದುಕೊಂಡು ಹೋಗುವ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈ ವಿಷಯವನ್ನು ಫ್ರ್ಯಾಂಚೈಸ್‌ಗಳೇ ತೀರ್ಮಾನಿಸಲಿವೆ‘ ಎಂದು ಬಿಸಿಸಿಯ ಮೂಲಗಳು ನೀಡಿರುವ ಹೇಳಿಕೆಯನ್ನು ’ಇಂಡಿಯನ್ ಎಕ್ಸ್‌ಪ್ರೆಸ್‌ ವೆಬ್‌ಸೈಟ್‌ ಪ್ರಕಟಿಸಿದೆ.

ADVERTISEMENT

’ಹಲವು ನಿಯಮಗಳನ್ನು ರೂಪಿಸಲು ಚಿಂತನೆ ನಡೆದಿದೆ. ಡ್ರೆಸ್ಸಿಂಗ್ ಕೋಣೆಯಲ್ಲಿ 15 ಮಂದಿ ಮಾತ್ರ ಇರಬೇಕು. ವೀಕ್ಷಕ ವಿವರಣೆ ಕಾರರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಪರಸ್ಪರ ಆರು ಅಡಿ ದೂರ ಇರಬೇಕು. ಡಗ್‌ಔಟ್‌ನಲ್ಲಿಯೂ ಹೆಚ್ಚು ಆಟಗಾರರು ಇರುವಂತಿಲ್ಲ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಲಿದೆ‘ ಎಂದು ಮೂಲಗಳು ತಿಳಿಸಿವೆ.

’ಎಲ್ಲ ಆಟಗಾರರಿಗೂ ಎರಡು ವಾರಗಳ ಅಂತರದಲ್ಲಿ ನಾಲ್ಕು ಬಾರಿ ಕೋವಿಡ್‌ ಟೆಸ್ಟ್‌ ನಡೆಸಲಾಗುವುದು. ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಫ್ರ್ಯಾಂಚೈಸ್‌ಗಳಿಗೆ ನಿಯಮಗಳ ಪ್ರತಿಯನ್ನು ನೀಡಲಾಗುವುದು‘ ಎಂದು ತಿಳಿಸಿದ್ದಾರೆ.

ಆಗಸ್ಟ್ 2ರಂದು ಐಪಿಎಲ್ ಆಡಳಿತ ಸಮಿತಿಯ ಸಭೆಯು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.