ADVERTISEMENT

ಕಮಿನ್ಸ್ ಬೌಲಿಂಗ್‌ನಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ರೀತಿ ಆಡಿದ ಸ್ಮಿತ್: ಹಾಗ್

ಏಜೆನ್ಸೀಸ್
Published 1 ಅಕ್ಟೋಬರ್ 2020, 13:12 IST
Last Updated 1 ಅಕ್ಟೋಬರ್ 2020, 13:12 IST
ಪ್ಯಾಟ್‌ ಕಮಿನ್ಸ್ ಬೌಲಿಂಗ್‌ ಮಾಡಿದ್ದು ಹೀಗೆ (ಟ್ವಿಟರ್ ಚಿತ್ರ)
ಪ್ಯಾಟ್‌ ಕಮಿನ್ಸ್ ಬೌಲಿಂಗ್‌ ಮಾಡಿದ್ದು ಹೀಗೆ (ಟ್ವಿಟರ್ ಚಿತ್ರ)   

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿಬರೋಬ್ಬರಿ ₹ 15.5 ಕೋಟಿ ಮೊತ್ತ ನೀಡಿ ಪ್ಯಾಟ್‌ ಕಮಿನ್ಸ್‌ ಅವರನ್ನು ಕೋಲ್ಕತ್ತ ನೈಟ್‌ರೈಡರ್ಸ್ ಪ್ರಾಂಚೈಸ್‌‌ ಖರೀದಿಸಿತ್ತು. ಇದು ಕ್ರಿಕೆಟ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ರ‌್ಯಾಂಕ್‌ನಲ್ಲಿರುವ ಈ ವೇಗಿ ಇದೀಗ ತಾವು ಪಡೆದಿರುವ ಮೊತ್ತಕ್ಕೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ.

ರಾಜಸ್ಥಾನ ರಾಯಲ್ಸ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳು ಬುಧವಾರ ಸೆಣಸಾಟ ನಡೆಸಿದ್ದವು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್‌ 175 ರನ್‌ಗಳ ಗುರಿ ನೀಡಿತ್ತು. ಇದಕ್ಕುತ್ತರವಾಗಿ ರಾಜಸ್ಥಾನ ತಂಡ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 137 ರನ್‌ ಗಳಿಸಲಷ್ಟೇ ಶಕ್ತವಾಗಿ, ಸೋಲೊಪ್ಪಿಕೊಂಡಿತ್ತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ರ‌್ಯಾಂಕ್‌ನಲ್ಲಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಮತ್ತು ಪ್ಯಾಟ್‌ಎರಡನೇ ಓವರ್‌ನಲ್ಲಿ ಮುಖಾಮುಖಿಯಾಗಿದ್ದರು. ಈ ಓವರ್‌ನಲ್ಲಿ ರನ್‌ ಗಳಿಸಲು ಪರದಾಡಿದ್ದ ಸ್ಮಿತ್‌, ಐದು ಎಸೆತಗಳಲ್ಲಿ ಕೇವಲ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ADVERTISEMENT

ಈ ಬಗ್ಗೆ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್‌, ‘ಗುರಿ ಬೆನ್ನಟ್ಟುವ ವೇಳೆ ಎರಡನೇ ಓವರ್‌ನಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ವಿಶ್ವದ ನಂ.1 ಟೆಸ್ಟ್‌ ಬೌಲರ್ ಪ್ಯಾಟ್‌ ಕಮಿನ್ಸ್‌, ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌‌ ಸ್ಟೀವ್‌ ಸ್ಮಿತ್‌ಗೆಬೌಲಿಂಗ್‌ ಮಾಡಿದರು. ಈ ಬಾರಿಯ ಐಪಿಎಲ್‌ನಲ್ಲಿ ಅಷ್ಟು ದುಬಾರಿ ಮೊತ್ತವನ್ನು ತಮಗೆ ನೀಡಿದ್ದು ಏಕೆ ಎಂಬುದನ್ನು ಪ್ಯಾಟ್‌ ಅಲ್ಲಿ ತೋರಿಸಿಕೊಟ್ಟರು. ಪ್ಯಾಟ್‌, ಸ್ಟೀವ್‌ ಸ್ಮಿತ್‌ ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ರೀತಿ ಆಡುವಂತೆ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಒಟ್ಟುಮೂರು ಓವರ್‌ ಎಸೆದಿದ್ದ ಕಮಿನ್ಸ್‌ ಕೇವಲ 13 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಪಂದ್ಯವನ್ನು ಕೆಕೆಆರ್‌ 37 ರನ್‌ ಅಂತರದಿಂದ ಗೆದ್ದು ಬೀಗಿತ್ತು. ಕೋಲ್ಕತ್ತ ಮತ್ತು ರಾಜಸ್ಥಾನ ತಂಡಗಳು ಅಂಕಪಟ್ಟಿಯಲ್ಲಿ ಕ್ರಮಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.