ADVERTISEMENT

IPL-2020 | KKR vs CSK: ಚೆನ್ನೈ ವಿರುದ್ಧ  ಕೋಲ್ಕತ್ತಗೆ 10 ರನ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 18:15 IST
Last Updated 7 ಅಕ್ಟೋಬರ್ 2020, 18:15 IST
   

ಅಬುಧಾಬಿ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ತಂಡ ರೋಚಕ ಜಯ ದಾಖಲಿಸಿತು.

ಸಾಂಘಿಕ ಹೋರಾಟದ ಫಲವಾಗಿ ಕೋಲ್ಕತ್ತ ತಂಡ 10 ರನ್‌ಗಳ ಜಯ ಪಡೆಯಿತು. ಬೌಲರ್‌ ಚಕ್ರವರ್ತಿ ಮತ್ತು ರಸೆಲ್‌ ತಂಡದ ಗೆಲುವಿಗೆ ನೆರವಾದರು.

ಶೇಖ್ ಜಯೇದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ 20 ಓವರ್‌ಗಳಲ್ಲಿ 167 ರನ್‌ ಗಳಿಸಿ ಆಲ್‌ಔಟ್ ಆಯಿತು. ಚೆನ್ನೈ ಬೌಲರ್‌ಗಳಾದ ಸ್ಯಾಮ್ ಕರನ್ (26ಕ್ಕೆ 2), ಶಾರ್ದೂಲ್ ಠಾಕೂರ್ (28ಕ್ಕೆ2), ಕರ್ಣ್ ಶರ್ಮಾ (25ಕ್ಕೆ2) ಮತ್ತು ಡ್ವೇನ್ ಬ್ರಾವೊ (37ಕ್ಕೆ3) ಅವರ ಅಮೋಘ ಬೌಲಿಂಗ್ ಎದುರಿಸುವಲ್ಲಿ ಕೆಕೆಆರ್‌ನ ಬಹುತೇಕ ಎಲ್ಲ ಬ್ಯಾಟ್ಸ್‌ಮನ್‌ಗಳೂ ವಿಫಲರಾದರು. ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಏಕಾಂಗಿ ಹೋರಾಟದ ಫಲವಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್‌ ಕಿಂಗ್ಸ್ ಎದುರು ಗೌರವಾರ್ಹ ಮೊತ್ತ ಗಳಿಸಿತು.

ADVERTISEMENT

ಬಲಗೈ ಬ್ಯಾಟ್ಸ್‌ಮನ್ ರಾಹುಲ್ (81; 51ಎಸೆತ, 8ಬೌಂಡರಿ, 3 ಸಿಕ್ಸರ್) ಅವರು ಮಾತ್ರ ದಿಟ್ಟತನದಿಂದ ಆಡಿದರು. ಆದರೆ, ಶುಭಮನ್ ಗಿಲ್, ನಿತೀಶ್ ರಾಣಾ, ಏಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್ ಮತ್ತು ನಾಯಕ ದಿನೇಶ್ ಕಾರ್ತಿಕ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಮಹೇಂದ್ರಸಿಂಗ್ ಧೋನಿಯ ತಂತ್ರಗಾರಿಕೆ ಬಿಡಲಿಲ್ಲ. ಒಂದೆಡೆ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಆದರೆ ಇನ್ನೊಂದು ತುದಿಯಲ್ಲಿ ಅವರೊಂದಿಗೆ ದೊಡ್ಡ ಜೊತೆಯಾಟ ಕಟ್ಟುವ ಪ್ರಯತ್ನಗಳನ್ನು ಬೌಲರ್‌ಗಳು ವಿಫಲಗೊಳಿಸಿದರು. ಚೆನ್ನೈ ತಂಡದ ಫೀಲ್ಡಿಂಗ್ ಕೂಡ ಗಮನ ಸೆಳೆಯಿತು.

ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚಿದ ಧೋನಿ ನಾಲ್ಕು ಕ್ಯಾಚ್ ಪಡೆದರು. ಒಂದು ರನ್‌ಔಟ್‌ಗೂ ಕಾರಣರಾದರು.

167 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ಮುಗ್ಗರಿಸಿತು. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿತು.

ಸ್ಕೋರ್‌
ಕೋಲ್ಕತ್ತ ನೈಟ್ ರೈಡರ್ಸ್: 167/10
ಚೆನ್ನೈ ಸೂಪರ್ ಕಿಂಗ್ಸ್‌ : 157/5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.