ADVERTISEMENT

IPL–2022 | ಗುಜರಾತ್ vs ರಾಜಸ್ಥಾನ ಫೈನಲ್ ಸೆಣಸಾಟ: ಈ ಸಲವೂ ಕಪ್ ಬೆಂಗಳೂರಿಗಿಲ್ಲ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2022, 20:02 IST
Last Updated 27 ಮೇ 2022, 20:02 IST
ಜೋಸ್‌ ಬಟ್ಲರ್‌ (ಪಿಟಿಐ ಚಿತ್ರ)
ಜೋಸ್‌ ಬಟ್ಲರ್‌ (ಪಿಟಿಐ ಚಿತ್ರ)   

ಅಹಮದಾಬಾದ್: ಸತತ ಹದಿನೈದನೇ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕಪ್ ಗೆಲ್ಲುವ ಕನಸು ಕಮರಿತು.

ಕನ್ನಡಿಗ ಪ್ರಸಿದ್ಧಕೃಷ್ಣ ಪರಿಣಾಮಕಾರಿ ಬೌಲಿಂಗ್ ಮತ್ತು ಜೋಸ್ ಬಟ್ಲರ್ ಅಮೋಘ ಶತಕದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡವು ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ 7 ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಗುಜರಾತ್ ಟೈಟನ್ಸ್‌ ಎದುರು ಕಣಕ್ಕಿಳಿಯಲಿದೆ.

2008ರಲ್ಲಿ ರಾಜಸ್ಥಾನ ತಂಡವು ಶೇನ್ ವಾರ್ನ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. ತಂಡದ ಮಾಜಿ ನಾಯಕ ಮತ್ತು ಕೋಚ್ ಆಗಿದ್ದ ವಾರ್ನ್‌ ಈಚೆಗೆ ನಿಧನರಾಗಿದ್ದಾರೆ. ಈ ಬಾರಿ ಟ್ರೋಫಿ ಜಯಿಸಿವಾರ್ನ್‌ ಅವರಿಗೆ ಸಮರ್ಪಿಸುವ ಛಲದಲ್ಲಿ ಸಂಜು ಸ್ಯಾಮ್ಸನ್ ಬಳಗವಿದೆ.

ADVERTISEMENT

ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಸಿದ್ಧಕೃಷ್ಣ ಮತ್ತು ಒಬೆದ್ ಮೆಕಾಯ್ ತಲಾ ಮೂರು ವಿಕೆಟ್ ಗಳಿಸಿದರು. ಇದರಿಂದಾಗಿ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್ ಗಳಿಸಿತು. ಅದಕ್ಕುತ್ತರವಾಗಿ ರಾಜಸ್ಥಾನ ತಂಡವು 18.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 161 ರನ್ ಗಳಿಸಿ ಗೆದ್ದಿತು.

ಜೋಸ್ ಬಟ್ಲರ್ (ಅಜೇಯ 106; 60ಎ, 4X10, 6X6) ಈ ಬಾರಿಯ ಟೂರ್ನಿಯಲ್ಲಿ ನಾಲ್ಕನೇ ಶತಕ ಪೂರೈಸಿದರು. ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು. ಯಶಸ್ವಿ ಜೈಸ್ವಾಲ್ (21 ರನ್) ಮತ್ತು ಬಟ್ಲರ್ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು. ಕೇವಲ ಐದು ಓವರ್‌ಗಳಲ್ಲಿ 61 ರನ್‌ಗಳು ಸೇರಿದವು. ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಯಶಸ್ವಿ ಔಟಾದಾಗ ಜೊತೆಯಾಟವೂ ಮುರಿಯಿತು.ಆದರೆ, ಬಟ್ಲರ್ ಆಟಕ್ಕೆ ತಡೆಯೇ ಇರಲಿಲ್ಲ. 23 ಎಸೆತಗಳಲ್ಲಿ ಅರ್ಧಶತಕ ತಲುಪಿದರು.

ಸಂಜು 23 ರನ್ ಗಳಿಸಿ ಹಸರಂಗಾ ಬೌಲಿಂಗ್‌ನಲ್ಲಿ ಔಟಾದರು. ದೇವದತ್ತ ಪಡಿಕ್ಕಲ್ ಕೂಡ 9 ರನ್ ಗಳಿಸಿ ನಿರ್ಗಮಿಸಿದರು. ಬಟ್ಲರ್ ತಾವೆದುರಿಸಿದ 59ನೇ ಎಸೆತದಲ್ಲಿ ಶತಕ ಪೂರೈಸಿದರು. ನಂತರದ ಎಸೆತದಲ್ಲಿ ಸಿಕ್ಸರ್ ಗಳಿಸಿ, ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಪ್ರಸಿದ್ಧ ಮಿಂಚು: ಫಫ್ ಡುಪ್ಲೆಸಿ ಬಳಗಕ್ಕೆ ಬೆಂಗಳೂರು ಹುಡುಗ ಪ್ರಸಿದ್ಧ ಕೃಷ್ಣ ಪೆಟ್ಟುಕೊಟ್ಟರು. ಅವರ ಸ್ವಿಂಗ್ಮೋಡಿಗೆ ವಿರಾಟ್ ಕೊಹ್ಲಿ , ದಿನೇಶ್ ಕಾರ್ತಿಕ್ ಮತ್ತು ಹಸರಂಗಾ ಅವರ ವಿಕೆಟ್‌ ಪತನವಾದವು. ಇದರಿಂದಾಗಿ ಆರ್‌ಸಿಬಿ ತಂಡದ ಆರಂಭ ಮತ್ತು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಬಿತ್ತು. ಅವರಿಗೆ ತಕ್ಕ ಜೊತೆ ನೀಡಿದ ಮೆಕಾಯ್ (23ಕ್ಕೆ3) ಕೂಡ ಉತ್ತಮ ಬೌಲಿಂಗ್ ಮಾಡಿದರು.ರಾಜಸ್ಥಾನ ಬೌಲರ್‌ಗಳು ಆರ್‌ಸಿಬಿಯಿಂದ ದೊಡ್ಡ ಜೊತೆಯಾಟಗಳು ದಾಖಲಾಗದಂತೆ ನೋಡಿಕೊಂಡರು.

ರಜತ್ ಅರ್ಧಶತಕ:ಎಲಿಮಿನೇಟರ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ರಜತ್ ಪಾಟೀದಾರ್ (58; 42; 4X4, 6X3) ಇಲ್ಲಿ ಅರ್ಧಶತಕ ಗಳಿಸಿದರು. ಅವರ ಚೆಂದದ ಬ್ಯಾಟಿಂಗ್‌ನಿಂದಾಗಿ ತಂಡವು ಗೌರವಯುತ ಮೊತ್ತ ಪೇರಿಸಲು ಸಾಧ್ಯವಾಯಿತು.

ಪ್ರಸಿದ್ಧ ಬೌಲಿಂಗ್ ಮಾಡಿದ ಆರನೇ ಓವರ್‌ನಲ್ಲಿ ರಜತ್ ಜೀವದಾನ ಪಡೆದರು. ಇದರ ಲಾಭ ಪಡೆದು ಅರ್ಧಶತಕದ ಗಡಿ ದಾಟಿದರು.ಅಶ್ವಿನ್ ಬೌಲಿಂಗ್‌ನಲ್ಲಿ ಜೋಸ್‌ ಬಟ್ಲರ್‌ಗೆ ಕ್ಯಾಚಿತ್ತ ರಜತ್ ಇನಿಂಗ್ಸ್‌ಗೆತೆರೆಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.