ADVERTISEMENT

ಟಿ20 ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್‌ನಲ್ಲಿ ಐಪಿಎಲ್ ಆಯೋಜನೆ?

ಏಜೆನ್ಸೀಸ್
Published 4 ಮೇ 2021, 14:25 IST
Last Updated 4 ಮೇ 2021, 14:25 IST
   

ನವದಹೆಲಿ: ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಉತ್ಸುಕವಾಗಿದೆ. ಸೆಪ್ಟೆಂಬರ್‌ನಲ್ಲಿ ಟಿ20 ವಿಶ್ವಕಪ್‌ಗೆ ತಯಾರಿ ಮೈದಾನವಾಗಿ ಐಪಿಎಲ್‌ನ ಉಳಿದ ಪಂದ್ಯಗಳನ್ನು ಆಯೋಜಿಸುವ ಇರಾದೆ ಹೊಂದಿದೆ.

ಹಲವು ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ತತ್‌ಕ್ಷಣದಿಂದಲೇ ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿಗೆ ಮುಂದೂಡಲು ಬಿಸಿಸಿಐ ಮಂಗಳವಾರದಂದು ನಿರ್ಧರಿಸಿತ್ತು. ಇದರೊಂದಿಗೆ ಅರ್ಧದಲ್ಲೇ ನಿಂತು ಹೋಗಿರುವ ಐಪಿಎಲ್ ಟೂರ್ನಿ ವೇಳಾಪಟ್ಟಿಯ ಉಳಿದಿರುವ ಪಂದ್ಯಗಳು ಯಾವಾಗ ಮತ್ತು ಎಲ್ಲಿ ಆಯೋಜನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಭಾರತದಲ್ಲೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಯೋಜನೆಯಾಗಲಿದೆ. ಆ ವೇಳೆಗೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದರೆ ಟಿ20 ವಿಶ್ವಕಪ್‌ಗೂ ಮುನ್ನ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಐಪಿಎಲ್ ಉಳಿದಿರುವ ಪಂದ್ಯಗಳನ್ನು ಆಯೋಜಿಸುವ ಗುರಿ ಹೊಂದಿದೆ.

ADVERTISEMENT

ಇದು ಟಿ20 ವಿಶ್ವಕಪ್‌ಗೆ ಸಿದ್ಧಗೊಳ್ಳಲು ಆಟಗಾರರಿಗೂ ಸೂಕ್ತ ವೇದಿಕೆಯನ್ನು ಒದಗಿಸಲಿದೆ ಎಂಬುದು ಗಮನಾರ್ಹವೆನಿಸುತ್ತದೆ.

ಈ ಕುರಿತಾಗಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಸೆಪ್ಟೆಂಬರ್ ವೇಳೆಗೆ ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಐಪಿಎಲ್ 14ನೇ ಆವೃತ್ತಿಯ ಪಂದ್ಯಗಳನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ.

ಯಾಕಾಗಬಾರದು? ವಿದೇಶಿ ಆಟಗಾರರು ಲಭ್ಯವಿದ್ದರೆ ಹಾಗೂ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ ವಿಶ್ವಕಪ್‌ಗೂ ಮೊದಲು ವೇದಕೆವೊದಗಿಸಬಹುದಾಗಿದೆ. ಇದು ಟಿ20 ವಿಶ್ವಕಪ್‌ಗೆ ತಯಾರಿ ಮೈದಾನವಾಗಲಿದೆ ಎಂದು ಹೇಳಿದ್ದಾರೆ.

ಹಾಗೊಂದು ವೇಳೆ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರಗೊಂಡಲ್ಲಿ ಐಪಿಎಲ್ ಕೂಡಾ ದುಬೈಗೆ ವರ್ಗಾವಣೆಯಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.