ADVERTISEMENT

IPL 2021: ಪ್ಲೇ ಆಫ್ ಪ್ರವೇಶದತ್ತ ಚೆನ್ನೈ ಚಿತ್ತ

ಅಗ್ರಸ್ಥಾನದಲ್ಲಿರುವ ಸೂಪರ್ ಕಿಂಗ್ಸ್‌ಗೆ ಸನ್‌ರೈಸರ್ಸ್ ಸವಾಲು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:15 IST
Last Updated 29 ಸೆಪ್ಟೆಂಬರ್ 2021, 16:15 IST
ರವೀಂದ್ರ ಜಡೇಜ ಮತ್ತು ಮಹೇಂದ್ರಸಿಂಗ್ ಧೋನಿ
ರವೀಂದ್ರ ಜಡೇಜ ಮತ್ತು ಮಹೇಂದ್ರಸಿಂಗ್ ಧೋನಿ   

ಶಾರ್ಜಾ: ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಈಗಾಗಲೇ 16 ಅಂಕಗಳನ್ನು ಗಳಿಸಿರುವ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಲಿದೆ. ಆದರೆ, ಕೇವಲ ನಾಲ್ಕು ಅಂಕಗಳಿಸಿರುವ ಸನ್‌ರೈಸರ್ಸ್ ತಂಡ ಈಗಾಗಲೇ ಈ ಹಾದಿಯಿಂದ ಹೊರಬಿದ್ದಿದೆ. ಎರಡು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ಎದುರು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಸನ್‌ರೈಸರ್ಸ್ ಬಲಿಷ್ಠ ಚೆನ್ನೈಗೆ ಪೈಪೋಟಿಯೊಡ್ಡಲು ಸಿದ್ಧವಾಗಿದೆ. 14ನೇ ಆವೃತ್ತಿಯ ಎರಡನೇ ಹಂತದಲ್ಲಿ ಧೋನಿ ಬಳಗವು ಇನ್ನೂ ಒಂದು ಪಂದ್ಯವನ್ನೂ ಸೋತಿಲ್ಲ. ಅದರ ಓಟಕ್ಕೆ ತಡೆಯೊಡ್ಡುವ ಛಲ ಕೇನ್ ವಿಲಿಯಮ್ಸನ್ ಅವರದ್ದು.

ಹೈದರಾಬಾದ್ ತಂಡದಲ್ಲಿ ಸ್ಥಿರವಾದ ಲಯದಲ್ಲಿರುವವರು ಕೇನ್ ವಿಲಿಯಮ್ಸನ್ ಒಬ್ಬರೇ. ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರುತ್ತಿಲ್ಲ. ಬೌಲಿಂಗ್ ವಿಭಾಗದಿಂದಲೂ ಸಂಘಟಿತ ಪ್ರಯತ್ನ ಒಡಮೂಡುತ್ತಿಲ್ಲ. ಹೋದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸ್ಥಾನ ಪಡೆದಿರಲಿಲ್ಲ. ಈ ಪಂದ್ಯಕ್ಕೂ ಅವರನ್ನೂ ಪರಿಗಣಿಸುವ ಸಾಧ್ಯತೆ ಕಡಿಮೆ.

ADVERTISEMENT

ಆದರೆ, ಚೆನ್ನೈ ತಂಡದಲ್ಲಿ ಸೋಲುವ ಹಂತದಲ್ಲಿಯೂ ಪುಟಿದೇಳುವ ಛಲವಿರುವ ಆಟಗಾರರಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್, ಅನುಭವಿ ಅಂಬಟಿ ರಾಯುಡು, ಫಫ್ ಡುಪ್ಲೆಸಿ, ದೀಪಕ್ ಚಾಹರ್ ಮತ್ತು ರವೀಂದ್ರ ಜಡೇಜ ಅವರ ಆಟದಿಂದಾಗಿ ತಂಡವು ಅಗ್ರಸ್ಥಾನಕ್ಕೇರಿದೆ. ಧೋನಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿಲ್ಲ. ಆದರೆ ತಮ್ಮ ನಾಯಕತ್ವದ ತಂತ್ರಗಳಿಂದ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈ ತಂಡವು ಸನ್‌ರೈಸರ್ಸ್ ವಿರುದ್ಧ ಜಯಗಳಿಸಿತ್ತು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸುವ ಛಲದಲ್ಲಿದೆ.

ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ಮಹೆಂದ್ರಸಿಂಗ್ ಧೋನಿ (ನಾಯಕ), ಋತುರಾಜ್ ಗಾಯಕವಾಡ್, ಸುರೇಶ್ ರೈನಾ, ಅಂಬಟಿ ರಾಯುಡು, ದೀಪಕ್ ಚಾಹರ್, ಡ್ವೇನ್ ಬ್ರಾವೊ, ಫಫ್ ಡುಪ್ಲೆಸಿ, ಲುಂಗಿ ಗಿಡಿ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಆರ್. ಸಾಯಿಕಿಶೋರ್, ಕೃಷ್ಣಪ್ಪ ಗೌತಮ್, ಇಮ್ರಾನ್ ತಾಹೀರ್, ಕರ್ಣ ಶರ್ಮಾ.

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಜೇಸನ್ ರಾಯ್, ಡೇವಿಡ್ ವಾರ್ನರ್, ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಅಬ್ದುಲ್ ಸಮದ್, ಮುಜೀಬ್ ಉರ್ ರೆಹಮಾನ್, ಶಾಬಾಜ್ ನದೀಂ, ಜೆ. ಸುಚಿತ್, ವಿಜಯಶಂಕರ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಬಲಾಬಲ:

ಪಂದ್ಯ- 25
ಚೆನ್ನೈ ಜಯ; 15
ಹೈದರಾಬಾದ್ ಜಯ; 10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.