ADVERTISEMENT

IPL 2021: ಹುಟ್ಟುಹಬ್ಬದಂದು ವಿಶಿಷ್ಟ ದಾಖಲೆ ಬರೆದ ಆ್ಯಂಡ್ರೆ ರಸೆಲ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 16:12 IST
Last Updated 29 ಏಪ್ರಿಲ್ 2021, 16:12 IST
   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೆಸ್ಟ್‌ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್, ಹುಟ್ಟುಹಬ್ಬದಂದೇ ವಿಶಿಷ್ಟ ದಾಖಲೆ ಬರೆದಿದ್ದಾರೆ.

ಗುರುವಾರದಂದು 33ನೇ ವರ್ಷಕ್ಕೆ ಕಾಲಿರಿಸಿರುವ ರಸೆಲ್, ಟಿ20 ಕ್ರಿಕೆಟ್‌ನಲ್ಲಿ 6,000 ರನ್‌ಗಳ ಸರದಾರ ಎಂದೆನಿಸಿದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಸೆಲ್, ಈ ವಿಶಿಷ್ಟ ಮೈಲಿಗಲ್ಲು ತಲುಪಿದರು.

ADVERTISEMENT

ಒಂದು ಹಂತದಲ್ಲಿ 82 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದರೆ ಕೊನೆಯ ಹಂತದಲ್ಲಿ ಕೇವಲ 27 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ ಅಜೇಯ 45 ರನ್ ಗಳಿಸಿದ್ದ ರಸೆಲ್, ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಪರಿಣಾಮ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತ್ತು.

ಈ ಮೂಲಕ ಹುಟ್ಟುಹಬ್ಬದಂದು ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ದಿನವಷ್ಟೇ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಚುಟುಕು ಕ್ರಿಕೆಟ್‌ನಲ್ಲಿ 10 ಸಹಸ್ರ ರನ್‌ಗಳ ಮೈಲಿಗಲ್ಲು ತಲುಪಿದ್ದರು.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರ ಪಟ್ಟಿಯನ್ನು ವಿಂಡೀಸ್‌ನವರೇ ಆದ ಕ್ರಿಸ್ ಗೇಲ್ ಮುನ್ನಡೆಸುತ್ತಿದ್ದಾರೆ. ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್, ಒಟ್ಟು 13,839 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೆರೆಬಿಯನ್ ಸ್ಟಾರ್ ಕೀರಾನ್ ಪೊಲಾರ್ಡ್ 10,694 ರನ್ ಪೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.