ADVERTISEMENT

IPL 2021 | DC vs PBKS : ರಾಹುಲ್–ಮಯಂಕ್ ಶತಕದ ಜೊತೆಯಾಟದ ರಂಗು

ಪಂಜಾಬ್ ಕಿಂಗ್ಸ್‌ ಉತ್ತಮ ಮೊತ್ತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 16:58 IST
Last Updated 18 ಏಪ್ರಿಲ್ 2021, 16:58 IST
ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ –ಪಿಟಿಐ ಚಿತ್ರ
ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ –ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಕನ್ನಡದ ಜೋಡಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಶತಕದ ಜೊತೆಯಾಟದ ರಂಗು ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣವನ್ನು ಆವರಿಸಿತು.

ಮೊದಲ ವಿಕೆಟ್‌ಗೆ ಇಬ್ಬರೂ ಸೇರಿಸಿದ 122 ರನ್‌ಗಳ ಬಲದಿಂದ ಪಂಜಾಬ್ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 195 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕಠಿಣ ಸವಾಲೊಡ್ಡಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೂರು ಜೀವದಾನ ಪಡೆದ ಕೆ.ಎಲ್. ರಾಹುಲ್ ಡೆಲ್ಲಿ ಪಾಲಿಗೆ ದುಬಾರಿಯಾದರು.

ADVERTISEMENT

ಬಹಳ ದಿನಗಳ ನಂತರ ಲಯ ಕಂಡುಕೊಂಡ ಮಯಂಕ್ ಜೊತೆಗೆ ರಾಹುಲ್ ಜೊತೆಯಾಟ ಕುದುರಿಸಿದರು. ರಾಹುಲ್ 51 ಎಸೆತಗಳಲ್ಲಿ 61 ರನ್‌ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು. ಮಯಂಕ್ ಅವರ ಆಟವು ರಾಹುಲ್ ಬ್ಯಾಟಿಂಗ್‌ ಅನ್ನು ಮೀರಿಸಿತು.

ಚೆಂದದ ಹೊಡೆತಗಳೊಂದಿಗೆ ಮಯಂಕ್ ಗಮನ ಸೆಳೆದರು. ಅವರ ಆಕರ್ಷಕ ಶೈಲಿಯ ಬ್ಯಾಟಿಂಗ್ ಚಿತ್ತಾಪಹಾರಿಯಾಗಿತ್ತು. ಕೇವಲ 36 ಎಸೆತಗಳಲ್ಲಿ 69 ರನ್‌ಗಳಿಸಿದರು. ಅವರೂ ಏಳು ಬೌಂಡರಿ ಬಾರಿಸಿದರು. ನಾಲ್ಕು ಸಿಕ್ಸರ್‌ ಕೂಡ ಸಿಡಿಸಿದರು.

13ನೇ ಓವರ್‌ನಲ್ಲಿ ಮಯಂಕ್ ವಿಕೆಟ್ ಗಳಿಸಿದ ಲಕ್ಮನ್ ಮೆರಿವಾಲಾ ಜೊತೆಯಾಟವನ್ನು ಮುರಿದರು. ಕ್ರಿಸ್ ಗೇಲ್ ಕೇವಲ 11 ರನ್ ಗಳಿಸಿ ನಿರ್ಗಮಿಸಿದರು. ಆದರೆ ದೀಪಕ್ ಹೂಡಾ (ಔಟಾಗದೆ 22; 13ಎಸೆತ) ಮತ್ತು ಶಾರೂಕ್ ಖಾನ್ (ಔಟಾಗದೆ 15; 5ಎಸೆತ) ತಂಡದ ಮೊತ್ತ ಹೆಚ್ಚಲು ಕಾಣಿಕೆ ನೀಡಿದರು.

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ಫೀಲ್ಡಿಂಗ್ ಲೋಪಗಳ ಕಾರಣ ಬೌಲರ್‌ಗಳ ಶ್ರಮ ವ್ಯರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.