ADVERTISEMENT

IPL 2021 | DD vs PKBS: ಆತಂಕದಲ್ಲಿ ರಾಹುಲ್ ಬಳಗದ ಅಗ್ರ ಕ್ರಮಾಂಕ

ಪಂಜಾಬ್ ಕಿಂಗ್ಸ್‌‌–ಡೆಲ್ಲಿ ಕ್ಯಾಪಿಟಲ್ಸ್‌ ಹಣಾಹಣಿ: ರಿಷಭ್ ಪಂತ್ ಪಡೆಗೆ ನಾರ್ಕಿಯ ಬಲ

ಪಿಟಿಐ
Published 17 ಏಪ್ರಿಲ್ 2021, 12:05 IST
Last Updated 17 ಏಪ್ರಿಲ್ 2021, 12:05 IST
ಕೆ.ಎಲ್‌.ರಾಹುಲ್ –ಪಿಟಿಐ ಚಿತ್ರ
ಕೆ.ಎಲ್‌.ರಾಹುಲ್ –ಪಿಟಿಐ ಚಿತ್ರ   

ಮುಂಬೈ: ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮತ್ತು ಪರಿಣಾಮಕಾರಿ ಬೌಲರ್‌ಗಳು ಇರುವುದರಿಂದ ಪಂದ್ಯ ರೋಮಾಂಚಕಾರಿಯಾಗುವ ನಿರೀಕ್ಷೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಮತ್ತು ಪಂಜಾಬ್ ತಂಡದ ಕೆ.ಎಲ್‌.ರಾಹುಲ್ ವಿಕೆಟ್ ಕೀಪಿಂಗ್‌ ಜೊತೆ ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗಿದ್ದು ಇಬ್ಬರೂ ಆಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೂಡ ಆಗಿದ್ದಾರೆ. ಎರಡೂ ತಂಡಗಳು ಹಿಂದಿನ ಪಂದ್ಯಗಳಲ್ಲಿ ಸೋತು ಮೂರನೇ ಪಂದ್ಯಕ್ಕೆ ಸಜ್ಜಾಗಿವೆ.

ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದ ಡೆಲ್ಲಿ ಕೊನೆಯ ಓವರ್‌ನಲ್ಲಿ ಸೋಲಿಗೆ ಶರಣಾಗಿತ್ತು. ಆ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಕೋಟಾ ಪೂರ್ತಿಗೊಳಿಸದೆ ಟಾಮ್ ಕರನ್ ಅವರಿಂದ ಬೌಲಿಂಗ್ ಮಾಡಿಸಿದ್ದಕ್ಕೆ ತಂಡದ ಕೋಚ್ ರಿಕಿ ಪಾಂಟಿಂಗ್ ಅವರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಈಗ ತಂಡದ ಬೌಲಿಂಗ್‌ ವಿಭಾಗ ಮತ್ತಷ್ಟು ಬಲ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾದ ಆ್ಯನ್ರಿಚ್ ನಾರ್ಕಿಯ ತಂಡಕ್ಕೆ ಮರಳಿರುವುದರಿಂದ ಪಂತ್ ಬಳಗದಲ್ಲಿ ವಿಶ್ವಾಸ ಹೆಚ್ಚಾಗಿದೆ.

ADVERTISEMENT

ಪಂಜಾಬ್ ಕಿಂಗ್ಸ್ ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲಿಗೆ ಶರಣಾಗಿತ್ತು. ದೀಪಕ್ ಚಾಹರ್ ಅವರ ಪರಿಣಾಮಕಾರಿ ದಾಳಿ ಮತ್ತು ರವೀಂದ್ರ ಜಡೇಜ ಅವರ ಮಿಂಚಿನ ಫೀಲ್ಡಿಂಗ್‌ಗೆ ತಂಡದ ಅಗ್ರ ಕ್ರಮಾಂಕ ಬೇಗನೇ ಪತನಗೊಂಡಿತ್ತು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಗಿಸೊ ರಬಾಡ, ಕ್ರಿಸ್ ವೋಕ್ಸ್‌ ಮುಂತಾದವರ ದಾಳಿಯನ್ನು ರಾಹುಲ್, ಕ್ರಿಸ್ ಗೇಲ್ ಮತ್ತು ದೀಪಕ್ ಹೂಡಾ ಯಾವ ರೀತಿ ಎದುರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಮೊಹಮ್ಮದ್ ಶಮಿ ಮತ್ತು ಆರ್ಷದೀಪ್ ಸಿಂಗ್ ಅವರ ವಿರುದ್ಧ ಪೃಥ್ವಿ ಶಾ ಮತ್ತು ಶಿಖರ್ ಧವನ್ ಅನುಸರಿಸಲಿರುವ ತಂತ್ರದ ಬಗ್ಗೆಯೂ ಕುತೂಹಲ ಎದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.