ADVERTISEMENT

IPL 2021: ಗಮನಾರ್ಹ ದಾಖಲೆ ಬರೆದು ಕೊಹ್ಲಿಗೆ ಸನ್ನೆ ಮಾಡಿದ ಮ್ಯಾಕ್ಸ್‌ವೆಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2021, 10:05 IST
Last Updated 30 ಸೆಪ್ಟೆಂಬರ್ 2021, 10:05 IST
ಚಿತ್ರ ಕೃಪೆ: Twitter/@RCBTweets
ಚಿತ್ರ ಕೃಪೆ: Twitter/@RCBTweets   

ದುಬೈ: ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 7,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪ್ರತಿನಿಧಿಸುತ್ತಿರುವ ಮ್ಯಾಕ್ಸ್‌ವೆಲ್, ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಈ ಮೈಲಿಗಲ್ಲು ಕ್ರಮಿಸಿದ್ದಾರೆ.

ಬೆಂಗಳೂರು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಮ್ಯಾಕ್ಸ್‌ವೆಲ್, ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಔಟಾಗದೆ ಉಳಿದರು. ಅವರ ಬಿರುಸಿನ ಆಟದಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಪಂದ್ಯದ ಬಳಿಕ ನಡೆದ ಟೀಮ್ ಮೀಟಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ ಸಾಧನೆಯನ್ನು ಉಲ್ಲೇಖಿಸಲಾಯಿತು. ಈ ಸಂದರ್ಭದಲ್ಲಿ ಕೊಹ್ಲಿ ಅವರತ್ತ ನೋಡುತ್ತಾ, ಇನ್ನು 3,000 ರನ್ ಮಾತ್ರ ಎಂದು ಸನ್ನೆ ಮಾಡಿದರು. ಈ ಸಂದರ್ಭದಲ್ಲಿ ಸಹ ಆಟಗಾರರೆಲ್ಲ ಮುಗುಳ್ನಕ್ಕರು.

ಕಳೆದ ಪಂದ್ಯದಲ್ಲಷ್ಟೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಟಿ20 ಕ್ರಿಕೆಟ್ ಮಾದರಿಯಲ್ಲಿ 10,000 ರನ್‌ಗಳ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನರಾದರು.

ಏತನ್ಮಧ್ಯೆ ರಾಜಸ್ಥಾನ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆರ್‌ಸಿಬಿ, ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.